ಕೋಲ್ಕತ್ತಾ: ಕರ್ನಾಟಕದಲ್ಲಿ ಬಿಜೆಪಿ ಕುದುರೆ ವ್ಯಾಪಾರಕ್ಕಿಳಿದು ಶಾಸಕರನ್ನು ಖರೀದಿಸಲು ಮುಂದಾಗಿದೆ ಎಂದು ಕರ್ನಾಟಕ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕುಟುಕಿದ್ದಾರೆ.


COMMERCIAL BREAK
SCROLL TO CONTINUE READING

ನಗರದ ಬ್ರಿಗೇಡ್ ಮೈದಾನದಲ್ಲಿ ಬಿಜೆಪಿ ವಿರೋಧಿ ಪಕ್ಷಗಳು ಹಮ್ಮಿಕೊಂಡಿರುವ ಬೃಹತ್ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಕುಮಾರಸ್ವಾಮಿ, ಕರ್ನಾಟಕದಲ್ಲಿ ಬಿಜೆಪಿ ಅನುಸರಿಸಿದ ನೀತಿ ಅಸಂವಿಧಾನಿಕವಾದುದು. ಇಷ್ಟೆಲ್ಲಾ ಮಾಡುತ್ತಿದ್ದರೂ ನೋಡಿಕೊಂಡು ಸುಮ್ಮನೆ ಇರುವುದಕ್ಕೆ ಜನರೇನು ದಡ್ಡರಲ್ಲ ಎಂದು ಅವರು ಅರಿತುಕೊಳ್ಳಬೇಕು. ಭ್ರಷ್ಟಾಚಾರ ವಿರೋಧಿ ಎನ್ನುವ ಬಿಜೆಪಿಗರೇ ಕರ್ನಾಟಕದಲ್ಲಿ ನಮ್ಮ ಶಾಸಕರಿಗೆ ಭಾರಿ ಹಣದ ಆಮಿಷವೊಡ್ಡಿ ಅವರನ್ನು ಸರಕುಗಳಂತೆ ನೋಡಿದರು ಎಂದು ಸಿಎಂ ಕುಮಾರಸ್ವಾಮಿ ಟೀಕಿಸಿದರು.


ಮುಂದುವರೆದು ಮಾತನಾಡಿದ ಅವರು, ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವಕ್ಕೆ ವಿರೋಧಿಯಾದುದು. ಈ ಸರ್ಕಾರ ಜನರ ಬೇಡಿಕೆಗೆ ಸರಿಯಾಗಿ ಸ್ಪಂದಿಸದೇ ಸರ್ವಾಧಿಕಾರ ಸಾಧಿಸುತ್ತಿದೆ. ಕರ್ನಾಟಕದಲ್ಲಿ ರೈತರ ಸಾಲ ಮನ್ನಾ ಮಾಡಲಾಗಿದ್ದರೂ ಅದನ್ನು ಟೀಕಿಸುವಂತಹ ಪ್ರವೃತ್ತಿ ಪ್ರಧಾನಿ ಅವರದ್ದು. ಕೇಂದ್ರ ಸರ್ಕಾರ ರಾಷ್ಟ್ರೀಯ ಬ್ಯಾಂಕುಗಳಲ್ಲಿ ಸಾಲ ಮನ್ನಾ ಮಾಡಿಸಲು ಮುಂದಾಗದಿದ್ದರೂ, ರಾಜ್ಯ ಸರ್ಕಾರದ ಕ್ರಮವನ್ನು ಟೀಕಿಸುತ್ತಿದೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. 


ಬಿಜೆಪಿ ಏನಿದ್ದರೂ ಪೇಪರ್​ ಟೈಗರ್​ ಮಾತ್ರ. ಹಾಗಾಗಿ ದೇಶದ ಸಮಸ್ಯೆಗಳ ನಿವಾರಣೆ ಪ್ರಾದೇಶಿಕ ಪಕ್ಷಗಳಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಇದೀಗ ಮುಂದಿನ ಲೋಕಸಭಾ ಚುನಾವಣೆಗೆ ದೇಶದಲ್ಲಿ ಬಿಜೆಪಿಯನ್ನು ಕಿತ್ತೊಗೆಯಲು ಪ್ರಾದೇಶಿಕ ಪಕ್ಷಗಳು ಒಗ್ಗಟ್ಟಾಗಿವೆ. ಇದರಿಂದ ಬಿಜೆಪಿಗೆ ಪ್ರಾದೇಶಿಕ ಪಕ್ಷಗಳ ಶಕ್ತಿ ಏನೆಂಬುದು ಅರಿವಾಗಲಿದೆ. ದೇಶದ ಅಭಿವೃದ್ಧಿಗೆ ನಾವೆಲ್ಲರೂ ಒಗ್ಗಟ್ಟಾಗಿ ಶ್ರಮಿಸೋಣ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.