ನಮ್ಮ ಶಾಸಕ ಶ್ರೀಮಂತ ಪಾಟೀಲರನ್ನು ಬಿಜೆಪಿ ನಾಯಕರು ಕಿಡ್ನಾಪ್ ಮಾಡಿದ್ದಾರೆ: ಡಿಕೆಶಿ
ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಅವರು ಹೃದಯ ನೋವಿನಿಂದ ಮುಂಬೈ ಆಸ್ಪತ್ರೆಗೆ ದಾಖಲಾಗಿಲ್ಲ. ಅವರನ್ನು ಬಲವಂತವಾಗಿ ಅಪಹರಿಸಲಾಗಿದೆ ಎಂದು ಡಿಕೆಶಿ ಸದನದಲ್ಲಿ ಆರೋಪಿಸಿದರು.
ಬೆಂಗಳೂರು: ಕಾಂಗ್ರೆಸ್ ಶಾಸಕ ಶ್ರೀಮಂತ ಪಾಟೀಲ್ ಅವರನ್ನು ರೆಸಾರ್ಟ್ ನಿಂದ ಹೈಜಾಕ್ ಮಾಡಲಾಗಿದೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
ಸದನದಲ್ಲಿ ವಿಶ್ವಾಸಮತ ಯಾಚನೆಗೂ ಮುನ್ನ ನಡೆದ ಚರ್ಚೆಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರು, ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಅವರು ಹೃದಯ ನೋವಿನಿಂದ ಮುಂಬೈ ಆಸ್ಪತ್ರೆಗೆ ದಾಖಲಾಗಿಲ್ಲ. ಅವರನ್ನು ಬಲವಂತವಾಗಿ ಅಪಹರಿಸಲಾಗಿದೆ. ಚಿಕಿತ್ಸೆ ಕೊಡುತ್ತಿರುವ ಹಾಗೆ ಮಲಗಿಸಿ ಫೋಟೋ ತೆಗೆದು ರಿಲೀಸ್ ಮಾಡಲಾಗಿದೆ. ಅಲ್ಲದೆ ಅದಕ್ಕೆ ಸೂಕ್ತ ಆಧಾರಗಳೂ ನನ್ನ ಬಳಿಯಿವೆ. ಅದನ್ನು ಸಲ್ಲಿಸುತ್ತೇನೆ ಎಂದು ಹೇಳಿ ಸ್ಪೀಕರ್ ಗೆ ವಿಮಾನ ಟಿಕೆಟ್ ಸಲ್ಲಿಸಿದರು. ಅಲ್ಲದೆ, ನಮ್ಮ ಶಾಸಕರಿಗೆ ರಕ್ಷಣೆ ಒದಗಿಸಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್, ಬುಧವಾರ ಸಂಜೆ ಕಾಂಗ್ರೆಸ್ ಶಾಸಕರೆಲ್ಲರೂ ಒಟ್ಟಿಗೆ ಸಭೆ ನಡೆಸಿ, ರಾತ್ರಿವರೆಗೆ ಒಟ್ಟಿಗೇ ಇದ್ದೆವು. ಆಗಲೂ ಶ್ರೀಮಂತ ಪಾಟೀಲ ಅವರು ಆರೋಗ್ಯವಾಗಿಯೇ ಇದ್ದರು. ರಾತ್ರಿ ಅವರು ರೆಸಾರ್ಟಿನಲ್ಲಿ ಕಾಣುತ್ತಿಲ್ಲ ಎಂದು ಕರೆ ಬಂತು. ಬೆಳಿಗ್ಗೆ ಮುಂಬೈ ಆಸ್ಪತ್ರೆಯಲ್ಲಿ ಹೃದಯ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿರುವ ಫೋಟೋ ರಿಲೀಸ್ ಆಗಿದೆ. ನಿಜವಾಗಲೂ ಆರೋಗ್ಯ ಸಮಸ್ಯೆ ಇದ್ದಿದ್ದರೆ ಇಲ್ಲೆಲ್ಲೂ ಆಸ್ಪತ್ರೆಗಳು ಇರಲಿಲ್ಲವೇ? ಅಲ್ಲದೆ, ಚೆನ್ನೈಗೆ ವಿಮಾನದಲ್ಲಿ ಹೋಗಿ, ಅಲ್ಲಿಂದ ಮುಂಬೈಗೆ ಹೋಗುವವರೆಗೆ ಇವರ ಅರೋಗ್ಯ ಚೆನ್ನಾಗಿತ್ತೆ? ಇದೆಲ್ಲಾ ಗಮನಿಸಿದರೆ ಈ ಪ್ರಕರಣದಲ್ಲಿ ಬಿಜೆಪಿ ಅವರ ಕೈವಾಡ ಎದ್ದು ಕಾಣುತ್ತಿದೆ. ಈ ಬಗ್ಗೆ ಗೃಹ ಇಲಾಖೆಯಿಂದ ಸಂಪೂರ್ಣ ತನಿಖೆ ನಡೆಯಬೇಕು ಎಂದು ಸ್ಪೀಕರ್ ಅರಮೇಶ್ ಕುಮಾರ್ ಅವರನ್ನು ಒತ್ತಾಯಿಸಿದರು.