ಲೋಕ ಸಮರದಲ್ಲಿ ಬಿಜೆಪಿಗೆ ಗೆಲುವು: ಇದು ರಾಷ್ಟ್ರೀಯ ಶಕ್ತಿಯ ವಿಜಯ ಎಂದ ಆರ್‌ಎಸ್‌ಎಸ್
ಮತ್ತೊಂದು ಬಾರಿ ದೇಶದಲ್ಲಿ ಸ್ಥಿರ ಸರ್ಕಾರ ದೊರೆತಿದೆ. ಇದು ಕೋಟ್ಯಂತರ ಭಾರತೀಯರ ಅದೃಷ್ಟವಾಗಿದ್ದು, ರಾಷ್ಟ್ರೀಯ ಶಕ್ತಿಗೆ ಸಿಕ್ಕ ದಿಗ್ವಿಜಯ ಎಂದ ಅವರು, ಪ್ರಜಾಪ್ರಭುತ್ವದ ಯಶಸ್ಸಿನ ಹಾದಿಯಲ್ಲಿ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಎಂದು ಆರ್‌ಎಸ್‌ಎಸ್ ನಾಯಕ ಭಯ್ಯಾಜಿ ಜೋಷಿ ಹೇಳಿದ್ದಾರೆ.
ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ಜಯ ಸಾಧಿಸಿದ ಬೆನ್ನಲ್ಲೇ ಇದು ರಾಷ್ಟ್ರೀಯ ಶಕ್ತಿಗೆ ಸಿಕ್ಕ ಜಯ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹೇಳಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ಭಯ್ಯಾಜಿ ಜೋಷಿ, ಮತ್ತೊಂದು ಬಾರಿ ದೇಶದಲ್ಲಿ ಸ್ಥಿರ ಸರ್ಕಾರ ದೊರೆತಿದೆ. ಇದು ಕೋಟ್ಯಂತರ ಭಾರತೀಯರ ಅದೃಷ್ಟವಾಗಿದ್ದು, ರಾಷ್ಟ್ರೀಯ ಶಕ್ತಿಗೆ ಸಿಕ್ಕ ದಿಗ್ವಿಜಯ ಎಂದ ಅವರು, ಪ್ರಜಾಪ್ರಭುತ್ವದ ಯಶಸ್ಸಿನ ಹಾದಿಯಲ್ಲಿ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ಅಲ್ಲದೆ, ಪ್ರಜಾಪ್ರಭುತ್ವದ ಆದರ್ಶ ಮತ್ತೊಮ್ಮೆ ಜಗತ್ತಿಗೆ ಪ್ರಸ್ತುತವಾಗಿದೆ ಎಂದಿದ್ದಾರೆ.
"ನೂತನ ಸರ್ಕಾರ ಜನಸಾಮಾನ್ಯರ ಅಭಿವ್ಯಕ್ತಿ, ಭಾವನೆಗಳು, ಆಕಾಂಕ್ಷೆಗಳು ಯಶಸ್ವಿಯಾಗಿರುವುದನ್ನು ಸಾಬೀತುಪಡಿಸುತ್ತದೆ. ಚುನಾವಣಾ ಪ್ರಕ್ರಿಯೆ ಮುಗಿದ ತಕ್ಷಣವೇ, ಎಲ್ಲಾ ಗೊಂದಲಗಳಿಗೂ ತೆರೆಬೀಳಲಿದೆ. ಎಲ್ಲರೂ ಅವರ ಅಭಿಪ್ರಾಯಗಳನ್ನು, ಭಾವನೆಗಳನ್ನು ನಮ್ರತೆಯಿಂದ ವ್ಯಕ್ತಪಡಿಸಬಹುದು" ಎಂದು ಹೇಳಿದ್ದಾರೆ.
ಲೋಕಸಭೆ ಚುನಾವಣೆಗಳ ಫಲಿತಾಂಶಗಳು ಇತ್ತೀಚೆಗೆ ಹೊರಬಿದ್ದ ಎಕ್ಸಿಟ್ ಪೋಲ್ ಸಮೀಕ್ಷೆಗಳಿಗಿಂತಲೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದ್ದು, ಪೂರ್ಣ ಬಹುಮತದೊಂದಿಗೆ ಕೇಂದ್ರದಲ್ಲಿ ಎರಡನೇ ಅವಧಿಗೆ ಸರ್ಕಾರ ರಚಿಸಲಿದೆ. ಈ ಬೆನ್ನಲ್ಲೇ ಪಕ್ಷದ ಕಾರ್ಯಕರ್ತರು ಬಿಜೆಪಿ ಪ್ರಧಾನ ಕಚೇರಿ ಎದುರು ವಿಜಯೋತ್ಸವ ಆಚರಿಸುತ್ತಿದ್ದಾರೆ.