ರೇವಾ(ಮಧ್ಯಪ್ರದೇಶ): ಸ್ವಚ್ಛ ಭಾರತ ಅಭಿಯಾನದ ಉತ್ತುಂಗದ ಹಂತವಾಗಿ, ಮಧ್ಯಪ್ರದೇಶದ ಬಿಜೆಪಿ ಶಾಸಕ ಜನಾರ್ದನ ಮಿಶ್ರಾ ಸ್ವತಃ ತಮ್ಮ ಬರಿಗೈಯಿಂದಲೇ ಕೊಳಕು ಶೌಚಾಲಯವನ್ನು ಸ್ವಚ್ಛಗೊಳಿಸಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗಿದೆ. 


COMMERCIAL BREAK
SCROLL TO CONTINUE READING

ಶೌಚಾಲಯದಲ್ಲಿ ಮಣ್ಣು ತುಂಬಿಕೊಂಡಿದ್ದರಿಂದ ಕಳೆದ ಹಲವು ದಿನಗಳಿಂದ ಶೌಚಾಲಯವನ್ನು ಬಳಸಲು ಸಾಧ್ಯವಾಗುತ್ತಿರಲಿಲ್ಲ ಎಂಬುದನ್ನು ಮನಗಂಡ ರೇವಾದ ಖಜುಹ ಹಳ್ಳಿಯ ಶಾಲಾ ಶೌಚಾಲಯವನ್ನು ಮಿಶ್ರಾ ಅವರು ಯಾವುದೇ ಸಲಕರಣೆ ಬಳಸದೇ ಬರಿಗೈಯಿಂದ ಶುಚಿಗೊಳಿಸಿದ್ದಾರೆ. ಈ ಮೂಲಕ ತಾವೇ ಶೌಚಾಲಯದ ದುರಸ್ತಿಗೆ ಮುಂದಾಗಿರುವುದು ಜನರ ಪ್ರಶಂಸೆಗೆ ಕಾರಣವಾಗಿದೆ.



ಇನ್ನೊಂದು ವಿಡಿಯೋದಲ್ಲಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಉಗುರನ್ನು ಕತ್ತರಿಸದೇ ಶಾಲೆಗೆ ಬಂದಿದ್ದರು. ಇದನ್ನು ಕಂಡ ಮಿಶ್ರಾ, ಅವರಿಗೆ ಸ್ವಚ್ಛತೆಯ ಕುರಿತು ಪಾಠ ಮಾಡಿದ್ದಾರೆ.



ಕಳೆದ ಜನವರಿಯಲ್ಲಿ, ಆಲೋವಾದ ಶಾಲೆಯೊಂದಕ್ಕೆ ಭೇಟಿ ನೀಡಿದ್ದ ಮಿಶ್ರಾ ಅವರು, ಅಲ್ಲಿನ ಮಕ್ಕಳು ಬಹಳ ದಿನಗಳಿಂದ ಸ್ನಾನ ಮಾಡದೇ ಕೊಲ್ಕಾಗಿದ್ದುದನ್ನು ಕಂಡು, ತಾವೇ ಓರ್ವ ವಿದ್ಯಾರ್ಥಿಗೆ ಸ್ನಾನ ಮಾಡಿಸುವ ಮೂಲಕ ಸ್ವಚ್ಚತೆಯ ಅರಿವು ಮೂಡಿಸಿದ್ದರು. ಅಲ್ಲದೆ, ಅಲ್ಲಿದ್ದ ಪೋಷಕರಿಗೂ ಮಕ್ಕಳಿಗೆ ಪ್ರತಿನಿತ್ಯ ಸ್ನಾನ ಮಾಡಿಸುವಂತೆ ತಿಳಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.  



ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 2, 2014 ರಲ್ಲಿ ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಇದೀಗ ಆ ಅಭಿಯಾನವನ್ನು ಮುನ್ನಡೆಸುವಲ್ಲಿ ಮಿಶ್ರಾ ಭಾಗಿಯಾಗಿದ್ದು, ಮೋದಿ ಅವರ ಮೆಚ್ಚುಗೆಗೆ ಪಾತ್ರವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.