ಪಂಜಾಬ್ ಉಪಚುನಾವಣೆಯಲ್ಲಿ ಬಿಜೆಪಿ-ಎಸ್‌ಎಡಿ ಮೈತ್ರಿಯಾಗಿ ಸ್ಪರ್ಧೆ: ಮಲಿಕ್
ಹರಿಯಾಣದಲ್ಲಿ ಸ್ವಂತವಾಗಿ ಸ್ಪರ್ಧಿಸುವುದು ಅಕಾಲಿ ದಳದ ನಿರ್ಧಾರವಾಗಿತ್ತು. ಆದರೆ ಪಂಜಾಬ್ ಉಪಚುನಾವಣೆಯಲ್ಲಿ ನಮ್ಮ ಮೈತ್ರಿ ಮುಂದುವರಿಯಲಿದೆ ಎಂದು ಪಂಜಾಬ್‌ನ ಬಿಜೆಪಿ ಘಟಕದ ಅಧ್ಯಕ್ಷ ಶ್ವೇತ್ ಮಲಿಕ್ ಶುಕ್ರವಾರ ಹೇಳಿದ್ದಾರೆ.
ಲುಧಿಯಾನ: ಹರಿಯಾಣ ವಿಧಾನಸಭೆ ಉಪಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಘೋಷಿಸಿದ ಬೆನ್ನಲ್ಲೇ, ಪಂಜಾಬ್ ನಲ್ಲಿ ಬಿಜೆಪಿ - ಶಿರೋಮಣಿ ಅಕಾಲಿ ದಳ ಮೈತ್ರಿಯಾಗಿ ಸ್ಪರ್ಧಿಸಲಿವೆ ಎಂದು ಪಂಜಾಬ್‌ನ ಬಿಜೆಪಿ ಘಟಕದ ಅಧ್ಯಕ್ಷ ಶ್ವೇತ್ ಮಲಿಕ್ ಶುಕ್ರವಾರ ಹೇಳಿದ್ದಾರೆ.
ಈ ಬಗ್ಗೆ ಎಎನ್‌ಐ ಜೊತೆ ಮಾತನಾಡಿದ ಮಲಿಕ್, "ಬಿಜೆಪಿ ಮತ್ತು ಎಸ್‌ಎಡಿ ನಡುವಿನ ಬಾಂಧವ್ಯ ಉತ್ತಮವಾಗಿದ್ದು, ಮೈತ್ರಿಯಾಗಿ ಪಂಜಾಬ್ ವಿಧಾನಸಭೆ ಉಪಚುನಾವಣೆಯಲ್ಲಿ ಸ್ಪರ್ಧಿಸಲಿವೆ" ಎಂದಿದ್ದಾರೆ.
"ಹರಿಯಾಣದಲ್ಲಿ ಸ್ವಂತವಾಗಿ ಸ್ಪರ್ಧಿಸುವುದು ಅಕಾಲಿ ದಳದ ನಿರ್ಧಾರವಾಗಿತ್ತು. ಆದರೆ ಪಂಜಾಬ್ ಉಪಚುನಾವಣೆಯಲ್ಲಿ ನಮ್ಮ ಮೈತ್ರಿ ಮುಂದುವರಿಯಲಿದೆ. ಪಕ್ಷವು ನಾಲ್ಕು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಶೀಘ್ರದಲ್ಲೇ ಪ್ರಕಟಿಸಲಿದೆ ಎಂದು ಮಲಿಕ್ ಹೇಳಿದರು.
ಇದೇ ವೇಳೆ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ವಿರುದ್ಧ ವಾಗ್ದಾಳಿ ನಡೆಸಿದ ಮಲಿಕ್, ಪ್ರಸ್ತುತ ರಾಜ್ಯ ಸರ್ಕಾರದ ಬಗ್ಗೆ ಸಾರ್ವಜನಿಕರು ಅಸಮಾಧಾನಗೊಂಡಿದ್ದಾರೆ. ಮರಳು ಮತ್ತು ಮದ್ಯ ಮಾಫಿಯಾಗಳು ಎಗ್ಗಿಲ್ಲದೆ ನಡೆಯುತ್ತಿವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ದುಸ್ಥಿತಿಯಲ್ಲಿದೆ ಎಂದು ಕಿಡಿಕಾರಿದರು.
ಅಕ್ಟೋಬರ್ 21 ರಂದು ರಾಜ್ಯದ ನಾಲ್ಕು ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದ್ದು, ಅಕ್ಟೋಬರ್ 24 ರಂದು ಫಲಿತಾಂಶ ಹೊರಬೀಳಲಿದೆ.