ಹೈದರಾಬಾದ್: ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿ ಗೆಲ್ಲಿಸಿದರೆ, ಹೈದರಾಬಾದ್ ಹೆಸರನ್ನು ಭಾಗ್ಯನಗರ ಎಂದು ಮರುನಾಮಕರಣ ಮಾಡಲಾಗುವುದು ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ತೆಲಂಗಾಣ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಹೈದರಾಬಾದ್ ನಲ್ಲಿ ಚುನಾವಣಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಯೋಗಿ ಆದಿತ್ಯನಾಥ್, ಮತದಾರರಿಗೆ ಹೈದರಾಬಾದ್ ಹೆಸರನ್ನು ಭಾಗ್ಯನಗರ ಎಂದು ಮರುನಾಮಕಾರಣ ಮಾಡುವುದಾಗಿ ಘೋಷಿಸಿದರು.


ಹೈದರಾಬಾದ್‍ನ ಗೋಷಮಹಲ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಬಿಜೆಪಿ ಶಾಸಕ ರಾಜಾ ಸಿಂಗ್ ಅವರು ಬಜೆಪಿ ಅಧಿಕಾರಕ್ಕೆ ಬಂದರೆ ಹೈದರಾಬಾದ್‍ನ ಹೆಸರನ್ನು ಮರುನಾಮಕರಣ ಮಾಡುವುದಾಗಿ ಕಳೆದ ತಿಂಗಳು ಹೇಳಿದ್ದರು. 


ಈ ಹಿಂದೆ ಹೈದರಾಬಾದ್ ನಗರವನ್ನು ಭಾಗ್ಯನಗರ ಎಂದು ಕರೆಯಲಾಗುತ್ತಿತ್ತು. ಆದರೆ 1590ರಲ್ಲಿ ಹೈದರಾಬಾದ್‍ಗೆ ಬಂದ ಕುತುಬ್ ಷಾ ಭಾಗ್ಯನಗರ ಹೆಸರನ್ನು ಹೈದರಾಬಾದ್ ಎಂದು ನಾಮಕರಣ ಮಾಡಿದ. ಆ ಸಂದರ್ಭದಲ್ಲಿ ಬಹಳಷ್ಟು ಹಿಂದೂಗಳ ಮೇಲೆ ಹಲ್ಲೆ ನಡೆಸಲಾಗಿತ್ತು. ಅಷ್ಟೇ ಅಲ್ಲದೆ ಹಲವಾರು ದೇವಸ್ಥಾನಗಳನ್ನು ನಾಶ ಮಾಡಲಾಗಿತ್ತು. ಇದೀಗ ಮತ್ತೆ ಹೈದರಾಬಾದ್ ನಗರಕ್ಕೆ ಭಾಗ್ಯನಗರ ಎಂದು ಮರುನಾಮಕರಣ ಮಾಡಲು ಬಿಜೆಪಿ ಚಿಂತಿಸಿದೆ. ಹಾಗೆಯೇ ಸಿಕಂದರಾಬಾದ್ ಮತ್ತು ಕರೀಂನಗರ ಹೆಸರನ್ನೂ ಬದಲಾಯಿಸಲಾಗುವುದು ಎಂದು ಅವರು ಹೇಳಿದ್ದರು. 


ಉತ್ತರಪ್ರದೇಶದಲ್ಲಿ ಜಿಲ್ಲೆಗಳಿಗೆ ಮರುನಾಮಕರಣ ಮಾಡುವುದಾಗಿ ಯೋಗಿ ಆದಿತ್ಯನಾಥ್ ಘೋಷಿಸಿದ ಬೆನ್ನಲೇ, ಎಲ್ಲೆಡೆ ನಗರಗಳ ಹೆಸರಿನ ಮರನಾಮಕರಣ ಕೂಗು ವ್ಯಕ್ತವಾಗುತ್ತಿದೆ. 


ತೆಲಂಗಾಣ ರಾಜ್ಯದ 119 ವಿಧಾನಸಭಾ ಕ್ಷೇತ್ರಗಳಿಗೆ ಡಿಸೆಂಬರ್ 7 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಫಲಿತಾಂಶ ಡಿಸೆಂಬರ್ 11 ರಂದು ಹೊರಬೀಳಲಿದೆ. ತೆಲಂಗಾಣದ ಮುಖ್ಯಮಂತ್ರಿಯಾಗಿದ್ದ ಕೆ.ಚಂದ್ರಶೇಖರ ರಾವ್ ಅವರು ವಿಧಾನಸಭೆಯನ್ನು ವಿಸರ್ಜಿಸಿದ್ದರಿಂದ ಅವಧಿಗೂ ಮುನ್ನವೇ ಚುನಾವಣೆ ನಡೆಯುತ್ತಿದೆ.