ತಡರಾತ್ರಿ 3.30ರವರೆಗೂ ವಾದ-ವಿವಾದ ಆಲಿಸಿದ ನ್ಯಾಯಾಧೀಶ
ಬಾಂಬೆ ಹೈಕೋರ್ಟ್ ನ್ಯಾಯಧೀಶರೊಬ್ಬರು ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಸಲುವಾಗಿ ಬೆಳಿಗ್ಗೆ 10 ಗಂಟೆಯಿಂದ ಶುಕ್ರವಾರ ತಡರಾತ್ರಿ 3.30ರವರೆಗೂ ಪ್ರಕರಣಗಳ ವಿಚಾರಣೆ ನಡೆಸಿದ್ದಾರೆ.
ಮುಂಬೈ: ಬಾಂಬೆ ಹೈಕೋರ್ಟ್ ನ್ಯಾಯಧೀಶರೊಬ್ಬರು ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಸಲುವಾಗಿ ಬೆಳಿಗ್ಗೆ 10 ಗಂಟೆಯಿಂದ ಶುಕ್ರವಾರ ತಡರಾತ್ರಿ 3.30ರವರೆಗೂ ಪ್ರಕರಣಗಳ ವಿಚಾರಣೆ ನಡೆಸಿದ್ದಾರೆ.
ನ್ಯಾಯಮೂರ್ತಿ ಶಾರುಕ್ ಜೆ ಕಥಾವಾಲಾ ಅವರೇ ತುರ್ತು ಅರ್ಜಿಗಳ ಇತ್ಯರ್ಥಕ್ಕಾಗಿ ರಾತ್ರಿ 3.30ರವರೆಗೆ ಕೆಲಸ ಮಾಡಿದರು. ಬೇಸಿಗೆ ಆರಂಭಕ್ಕೂ ಮುನ್ನ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ನಿರ್ಧರಿಸಿದ ನ್ಯಾಯಾಧೀಶರು, ಸುಮಾರು 100ಕ್ಕೂ ಹೆಚ್ಚು ಸಿವಿಲ್ ಅರ್ಜಿಗಳ ವಿಚಾರಣೆ ನಡೆಸಿದ್ದಾರೆ. ಈ ರೀತಿ ಸುಮಾರು 17 ಗಂಟೆಗಳ ಕಾಲ ಬಿಡುವಿಲ್ಲದಂತೆ ಇದುವರೆಗೂ ಯಾರೂ ಅರ್ಜಿ ವಿಚಾರಣೆ ನಡೆಸಿಲ್ಲ ಎನ್ನಲಾಗಿದೆ.
ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಕಲಾಪ ಆರಂಭಿಸಿದ ನ್ಯಾಯಮೂರ್ತಿಗಳು ರಾತ್ರಿ 3.30ರವರೆಗೂ ಲವಲವಿಕೆಯಿಂದ, ತಾಳ್ಮೆಯಿಂದಲೇ ವಿಚಾರಣೆ ನಡೆಸಿ, ಮನೆಗೆ ಹೊರಟರೂ, ಯಥಾಪ್ರಕಾರ ಶನಿವಾರ ಬೆಳಿಗ್ಗೆ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಇನ್ನು ಕೋರ್ಟ್ ಕಲಾಪ ಹಿನ್ನೆಲೆಯಲ್ಲಿ ರಾತ್ರಿಯಿಡೀ ಬಾಂಬೆ ಹೈಕೋರ್ಟ್ ಸಿಬ್ಬಂದಿ, ವಕೀಲರು ಮತ್ತು ದೂರುದಾರಿಂದ ತುಂಬಿತ್ತು.