ಮಲೆನಾಡು ಪ್ರದೇಶಗಳಲ್ಲಿ BSNL ಟವರ್ ಸಿಗ್ನಲ್ ಸಮಸ್ಯೆ ಕುರಿತು ಸಂಸತ್ತಿನಲ್ಲಿ ದನಿ ಎತ್ತಿದ ಸಂಸದ ಬಿವೈಆರ್
ಬಿ.ಎಸ್.ಎನ್.ಎಲ್. ಒಂದು ಕೇಂದ್ರ ಸರ್ಕಾರದ ಸಾರ್ವಜನಿಕ ಉದ್ದಿಮೆ. ಈ ಉದ್ದಿಮೆಯಲ್ಲಿ ಸಮಯಕ್ಕೆ ಸರಿಯಾಗಿ ಯಾವುದೇ ದುರಸ್ತಿ ಕಾರ್ಯವಾಗಲೀ, ನಿರ್ವಹಣೆಯಾಗಲೀ ನಡೆಯುತ್ತಿಲ್ಲ- ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ
ನವದೆಹಲಿ: ಸಂಸತ್ತಿನಲ್ಲಿ ಮಲೆನಾಡಿನ ಗುಡ್ಡಗಾಡು ಪ್ರದೇಶಗಳಲ್ಲಿ ಬಿ.ಎಸ್.ಎನ್.ಎಲ್ .ಟವರ್ ಸಿಗ್ನಲ್ ಸಮಸ್ಯೆಗಳಿಂದ ಗ್ರಾಹಕರಿಗೆ ಆಗುತ್ತಿರುವ ತೊಂದರೆ ಕುರಿತು ಸಂಸತ್ತಿನಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ದನಿ ಎತ್ತಿದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಬಿ.ವೈ.ರಾಘವೇಂದ್ರ ಅವರು ಬುಧವಾರ ಸಂಸತ್ತಿನಲ್ಲಿ ಸಾರ್ವಜನಿಕ ಪ್ರಾಮುಖ್ಯತೆಯಡಿಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬಿ.ಎಸ್.ಎನ್.ಎಲ್ ಸಂಪರ್ಕದ ಸಮಸ್ಯೆ ಕುರಿತು ಪ್ರಸ್ತಾಪಿಸಿದರು.
ಕರ್ನಾಟಕ ರಾಜ್ಯದ ಗ್ರಾಮೀಣ ವಿಭಾಗದಲ್ಲಿ ಬಿ.ಎಸ್.ಎನ್.ಎಲ್ ಸಂಪರ್ಕದಲ್ಲಿ ತೀವ್ರ ಸಮಸ್ಯೆ ಉಂಟಾಗಿದೆ. ಅದರಲ್ಲೂ ಮಲೆನಾಡಿನ ಬೆಟ್ಟ - ಗುಡ್ಡ ಪ್ರದೇಶ ಮತ್ತು ಕರವಾಳಿ ಪ್ರದೇಶಗಳು ಅತಿ ಸಂಕಷ್ಟದಲ್ಲಿ ಸಿಲುಕಿವೆ ಎಂದು ಸಭಾಧ್ಯಕ್ಷರ ಮೂಲಕ ಸರ್ಕಾರದ ಗಮನ ಸೆಳೆದರು.
ಬಿ.ಎಸ್.ಎನ್.ಎಲ್. ಒಂದು ಕೇಂದ್ರ ಸರ್ಕಾರದ ಸಾರ್ವಜನಿಕ ಉದ್ದಿಮೆ. ಈ ಉದ್ದಿಮೆಯಲ್ಲಿ ಸಮಯಕ್ಕೆ ಸರಿಯಾಗಿ ಯಾವುದೇ ದುರಸ್ತಿ ಕಾರ್ಯವಾಗಲೀ, ನಿರ್ವಹಣೆಯಾಗಲೀ ನಡೆಯುತ್ತಿಲ್ಲ. ಅಳವಡಿಸಿರುವ ಟವರ್ಸ್, ಜನರೇಟರ್ ಗಳಿಗೆ ಸಮರ್ಪಕವಾಗಿ ಡೀಸೆಲ್ ಪೂರೈಕೆಯಾಗದೇ ಕೆಲಸ ನಿರ್ವಹಿಸುತ್ತಿಲ್ಲ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ತೀರ್ಥಹಳ್ಳಿ, ಸಾಗರ ಮತ್ತು ಬೈಂದೂರು ವಿಧಾನಸಭಾ ಕ್ಷೇತ್ರಗಳಲ್ಲದೇ ಕರ್ನಾಟಕದ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿನ ಜನರು ತುಂಬಾ ದೊಡ್ಡ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ ಎಂದು ಸಂಸದ ಬಿವೈಆರ್ ಹೇಳಿದರು.
ಕೇಂದ್ರ ಸರ್ಕಾರ ಡಿಜಿಟಲ್ ಇಂಡಿಯಾ ಕಾನ್ಸೆಪ್ಟ್ ಅಡಿಯಲ್ಲಿ ಇಂದಿನ ಯುವ ಪೀಳಿಗೆ ತಮ್ಮ ಸ್ವಂತ ಖಾಸಗಿ ಕೆಲಸಗಳನ್ನು ಮತ್ತು ಸರ್ಕಾರಿ ಕೆಲಸಗಳನ್ನು ಸಮರ್ಪಕವಾಗಿ ನಿರ್ವಹಿಸಲು ಬಿ.ಎಸ್.ಎನ್.ಎಲ್ ನೆಟ್ವರ್ಕ್ ಅವಶ್ಯಕತೆ ಇದೆ ಎಂದು ಇದೇ ಸಂದರ್ಭದಲ್ಲಿ ಅವರು ಮನವಿ ಮಾಡಿದರು.