ಪೌರತ್ವ (ತಿದ್ದುಪಡಿ) ಕಾಯ್ದೆ: ಕೇಂದ್ರ ಸಚಿವ ಸುರೇಶ ಅಂಗಡಿಯವರಿಂದ ವಿವಾದಾತ್ಮಕ ಹೇಳಿಕೆ
ಈ ಕುರಿತು ಹೇಳಿಕೆ ನೀಡಿರುವ ಹಾಗೂ ಕೇಂದ್ರದ ಮೋದಿ ಸರ್ಕಾರದಲ್ಲಿ ಮಂತ್ರಿಯಾಗಿರುವ ಸುರೇಶ ಅಂಗಡಿ, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ತಲುಪಿಸುವ ಪ್ರತಿಭಟನಾಕಾರರನ್ನು ಕಂಡಲ್ಲಿ ಗುಂಡಿಕ್ಕಿ ಎಂಬ ಹೇಳಿಕೆ ನೀಡಿ ವಿವಾದ ಹುಟ್ಟುಹಾಕಿದ್ದಾರೆ.
ನವದೆಹಲಿ:ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುತ್ತಿರುವ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಧಕ್ಕೆ ತರುವ ಪ್ರತಿಭಟನಾಕಾರರ ವಿರುದ್ಧ ಕೇಂದ್ರ ರೇಲ್ವೆ ಖಾತೆಯ ರಾಜ್ಯ ಸಚಿವ ಸುರೇಶ ಅಂಗಡಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ANI ಸುದ್ದಿಸಂಸ್ಥೆ ಪ್ರಕಟಿಸಿರುವ ಟ್ವೀಟ್ ಪ್ರಕಾರ, "ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ತಲುಪಿಸುವ ಪ್ರತಿಭಟನಾಕಾರರ ಮೇಲೆ ಕಂಡಲ್ಲಿ ಗುಂಡಿಕ್ಕಿ" ಎಂದು ಅಂಗಡಿ ಹೇಳಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು "ನಾನು ಇದಕ್ಕೆ ಸಂಬಂಧಿಸಿದಂತೆ ಆಡಳಿತ ಹಾಗೂ RPF ಎರಡೂ ಸಂಸ್ಥೆಗಳಿಗೆ ನಿರ್ದೇಶನಗಳನ್ನು ಜಾರಿಗೊಳಿಸಿದ್ದು, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ತಲುಪಿಸುವ ಪ್ರತಿಭಟನಾಕಾರರನ್ನು ಕಂಡಲ್ಲಿ ಗುಂಡಿಕ್ಕಿ" ಎಂದು ಆದೇಶಿಸಿರುವುದಾಗಿ ತಿಳಿಸಿದ್ದಾರೆ. ನಾಲ್ಕು ದಿನಗಳ ಹಿಂದೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುತ್ತಿದ್ದ ಪ್ರತಿಭಟನಾಕಾರರು ಅಲ್ಲಿನ ರೇಲ್ವೆ ಸ್ಟೇಷನ್ ವೊಂದಕ್ಕೆ ಬೆಂಕಿ ಇಟ್ಟಿದ್ದರು ಎಂಬುದು ಇಲ್ಲಿ ಉಲ್ಲೇಖನೀಯ. ಈ ಘಟನೆಯ ಬಳಿಕ ರೇಲ್ವೆ ಖಾತೆ ರಾಜ್ಯ ಸಚಿವರು ಈ ಹೇಳಿಕೆ ನೀಡಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದ್ದು, ಈ ಮಧ್ಯೆ ಕೇಂದ್ರ ಸಚಿವರು ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಪಶ್ಚಿಮ ಬಂಗಾಳ ಹಾಗೂ ಪೂರ್ವೊತ್ತರದ ರಾಜ್ಯಗಳಲ್ಲಿ ಈಗಾಗಲೇ ರೇಲ್ವೆ ಇಲಾಖೆ ಭಾರಿ ನಷ್ಟ ಎದುರಿಸುತ್ತಿದ್ದು, ಇಂತಹ ಹಿಂಸಾತ್ಮಕ ಪ್ರತಿಭಟನೆಗಳನ್ನು ಕ್ಷಮಿಸಲಾಗದು ಎಂದು ಸುರೇಶ ಅಂಗಡಿ ಹೇಳಿದ್ದಾರೆ.
"ರೇಲ್ವೆ ಇಲಾಖೆಯ ಮೂಲಸೌಕರ್ಯಗಳ ಅಭಿವೃದ್ಧಿ ಹಾಗೂ ರೈಲುಗಳಲ್ಲಿ ಸ್ವಚ್ಚತೆಯನ್ನು ಕಾಪಾಡಲು ಹಗಲು-ರಾತ್ರಿ ಎನ್ನದೆ 13 ಲಕ್ಷ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಪ್ರತಿಪಕ್ಷಗಳ ಕುಮ್ಮಕ್ಕು ಹೊಂದಿರುವ ಕೆಲ ಸಮಾಜವಿರೋಧಿ ಕಿಡಿಗೇಡಿಗಳು ದೇಶದಲ್ಲಿ ಸಮಸ್ಯೆಗಳನ್ನು ಹುಟ್ಟುಹಾಕುತ್ತಿದ್ದಾರೆ" ಎಂದೂ ಕೂಡ ಅವರು ಹೇಳಿದ್ದಾರೆ.