ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಸಂಬಂಧ ಇಂದು ಕ್ಯಾಬಿನೆಟ್ ಸಭೆ; ಮಹತ್ವದ ನಿರ್ಧಾರ ಸಾಧ್ಯತೆ
ಕ್ಯಾಬಿನೆಟ್ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಇಂದು ನಡೆಯಲಿರುವ ಸಭೆಯಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದು, ಪಟ್ಟಿ ಸಿದ್ಧವಾದ ಬಳಿಕ ಸರ್ಕಾರ ಅಧಿಸೂಚನೆ ಹೊರಡಿಸಲಿದೆ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮನವಿಯ ಹಿನ್ನೆಲೆಯಲ್ಲಿ ಏಕ ಬಳಕೆ ಪ್ಲಾಸ್ಟಿಕ್ ವಿರುದ್ಧ ಅಭಿಯಾನ ತೀವ್ರಗೊಂಡಿದ್ದು, ಈ ಸಂಬಂಧ ಕ್ಯಾಬಿನೆಟ್ ಇಂದು ಮಹತ್ವದ ಸಭೆ ನಡೆಸಲಿದೆ.
ಈಗಾಗಲೇ ಸಚಿವಾಲಯಗಳು ತನ್ನೆಲ್ಲಾ ಇಲಾಖೆಗಳಿಗೆ ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧಕ್ಕೆ ಸೂಚನೆ ನೀಡಲಾಗಿದ್ದು, ಬಳಸಬಹುದಾದ ಮತ್ತು ನಿಷೇಧಿಸಲಾದ ಪ್ಲಾಸ್ಟಿಕ್ ವಸ್ತುಗಳ ಪ್ರತ್ಯೇಕ ಎರಡು ಪಟ್ಟಿಗಳನ್ನು ಪರಿಸರ ಸಚಿವಾಲಯ ಈ ವಾರ ಬಿಡುಗಡೆ ಮಾಡುವ ಸಾಧ್ಯತೆಯಿದೆ.
ಕ್ಯಾಬಿನೆಟ್ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಇಂದು ನಡೆಯಲಿರುವ ಸಭೆಯಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದು, ಪಟ್ಟಿ ಸಿದ್ಧವಾದ ಬಳಿಕ ಸರ್ಕಾರ ಅಧಿಸೂಚನೆ ಹೊರಡಿಸಲಿದೆ. ಮಾಹಿತಿಯ ಪ್ರಕಾರ, ಅಕ್ಟೋಬರ್ 2 ರ ಬಳಿಕ ರೈಲ್ವೆ ನಿಲ್ದಾಣದ ಆವರಣದಲ್ಲಿ ಪ್ಲಾಸ್ಟಿಕ್ ವಸ್ತುಗಳ ಬಳಕೆ ನಿಷೇಧಿಸಲು ಚಿಂತನೆ ನಡೆಸಿದೆ ಎನ್ನಲಾಗಿದೆ.
ನಿನ್ನೆ ನೋಯ್ಡಾದಲ್ಲಿ ನಡೆದ ವಿಶ್ವಸಂಸ್ಥೆಯ ಹವಾಮಾನ ವೈಪರೀತ್ಯದ 14ನೇ ಅಂತಾರಾಷ್ಟ್ರೀಯ ಅಧಿವೇಶನದಲ್ಲಿ ಭೂಮಿಯ ಮೇಲೆ ಹೂಡಿಕೆ ಮಾಡುವುದು ಮತ್ತು ಅವಕಾಶಗಳನ್ನು ಸೃಷ್ಟಿಸುವ ವಿಷಯದ ಕುರಿತು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಏಕ ಬಳಕೆಯ ಪ್ಲಾಸ್ಟಿಕ್ ಕೊನೆಗಾಣಿಸುವುದಾಗಿ ಘೋಷಿಸಿದ್ದಾರೆ.