ಇನ್ನು ಮುಂದೆ ವೇತನ ಪಾವತಿಸಲು ಸಾಧ್ಯವಿಲ್ಲ, ಬೇರೆ ಕೆಲಸ ಹುಡುಕಿಕೊಳ್ಳಿ: ತನ್ನ ನೌಕರರಿಗೆ ಮೆಹುಲ್ ಚೋಕ್ಸಿ ಪತ್ರ
ಬ್ಯಾಂಕ್ ಸಾಲ ವಂಚನೆ ಪ್ರಕರಣದ ಪ್ರಮುಖ ಆರೋಪಿ, ಗೀತಾಂಜಲಿ ಜೆಮ್ಸ್ ಸ್ಥಾಪಕ ಮೆಹುಲ್ ಚೋಕ್ಸಿ, ತನ್ನ ಕಂಪನಿ ಉದ್ಯೋಗಿಗಳಿಗೆ ಮುಂದಿನ ದಿನಗಳಲ್ಲಿ ಸಂಬಳ ಮತ್ತು ಇತರ ಬಾಕಿ ಹಣವನ್ನು ನೀಡಲು ಸಾಧ್ಯವಿಲ್ಲ ಎಂದಿದ್ದು, ಬೇರೆ ಉದ್ಯೋಗ ಹುಡುಕಿಕೊಳ್ಳಲು ಹೇಳಿದ್ದಾರೆ.
ನವದೆಹಲಿ : 11,400ಕೋಟಿ ರೂ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಸಾಲ ವಂಚನೆ ಪ್ರಕರಣದ ಪ್ರಮುಖ ಆರೋಪಿ, ಗೀತಾಂಜಲಿ ಜೆಮ್ಸ್ ಸ್ಥಾಪಕ ಮೆಹುಲ್ ಚೋಕ್ಸಿ, ತನ್ನ ಕಂಪನಿ ಉದ್ಯೋಗಿಗಳಿಗೆ ಮುಂದಿನ ದಿನಗಳಲ್ಲಿ ಸಂಬಳ ಮತ್ತು ಇತರ ಬಾಕಿ ಹಣವನ್ನು ನೀಡಲು ಸಾಧ್ಯವಿಲ್ಲ ಎಂದಿದ್ದು, ಬೇರೆ ಉದ್ಯೋಗ ಹುಡುಕಿಕೊಳ್ಳಲು ಹೇಳಿದ್ದಾರೆ.
"ಸರ್ಕಾರದ ಏಜೆನ್ಸಿಗಳು/ತನಿಖಾ ಏಜೆನ್ಸಿಗಳು ನನ್ನ ವಿವಿಧ ಬ್ಯಾಂಕ್ ಖಾತೆಗಳನ್ನು ಮತ್ತು ಇತರ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳುವ ದೃಷ್ಟಿಯಿಂದ, ನಿಮ್ಮ ಬಾಕಿಗಳನ್ನು ಅಥವಾ ಭವಿಷ್ಯದ ಸಂಬಳವನ್ನು ಪಾವತಿಸಲು ಈಗ ನನಗೆ ತುಂಬಾ ಕಠಿಣವಾಗಿದೆ. ಮೊದಲನೆಯದಾಗಿ, ವೇತನಗಳ ಪಾವತಿಯ ಬಗ್ಗೆ ಯಾವುದೇ ನಿಶ್ಚಿತತೆಯಿಲ್ಲ. ಎರಡನೆಯದಾಗಿ, ಕಚೇರಿ ನಡೆಸಲು ಅಲ್ಲಿನ ವಿದ್ಯುತ್ ಮತ್ತು ನಿರ್ವಹಣಾ ವೆಚ್ಚಗಳ ಪಾವತಿ ಸಾಧ್ಯವಿಲ್ಲ. ಮೂರನೆಯದಾಗಿ, ತನಿಖಾ ಸಂಸ್ಥೆಗಳು ನಡೆಸಿದ ಪಕ್ಷಪಾತದ ತನಿಖೆಯಿಂದಾಗಿ, ನನ್ನೊಂದಿಗೆ ಸಂಪರ್ಕದಲ್ಲಿರುವ ಅಥವಾ ಈ ಪ್ರಕರಣದ ಸಂಬಂಧ ಬೇರೆ ಯಾರೂ ಕಷ್ಟಪಡುವುದು ಇಷ್ಟವಿಲ್ಲ. ಹಾಗಾಗಿ ಬೇರೆ ವೃತ್ತಿ ಅವಕಾಶಗಳನ್ನು ಹುಡುಕಿಕೊಳ್ಳಲು ನಾನು ನಿಮ್ಮನ್ನು ವಿನಂತಿಸುತ್ತೇನೆ" ಎಂದು ಅವರು ಶುಕ್ರವಾರ ಭಾರತದ ಸಿಬ್ಬಂದಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಅವರ ವಿರುದ್ಧದ ಎಲ್ಲಾ ಆರೋಪಗಳೂ ಸುಳ್ಳು ಎಂದಿರುವ ಚೋಕ್ಸಿ, "ನಾನು ಯಾವುದೇ ತಪ್ಪು ಮಾಡಿಲ್ಲ, ಸತ್ಯಕ್ಕೆ ಜಯವಾಗಲಿದೆ" ಎಂದಿದ್ದಾರೆ. ಕಂಪೆನಿಯ ಕಾರ್ಯಾಚರಣೆಗಳನ್ನು ನಿಲ್ಲಿಸುವ ಹಂತಕ್ಕೆ ಭಾರತದಲ್ಲಿನ ಏಜೆನ್ಸಿಗಳು ನರಕವನ್ನೇ ಸೃಷ್ಟಿಸುತ್ತಿವೆ. ನಾನು ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದೇನೆ" ಎಂದು ಅವರು ಬರೆದಿದ್ದಾರೆ.
ಅಲ್ಲದೆ, ತಮ್ಮ ಕಂಪನಿ ನೌಕರರ ಬಾಕಿಯನ್ನು ತಕ್ಷಣದಲ್ಲಿ ಭರಿಸಲು ಸಾಧ್ಯವಾಗುವುದಿಲ್ಲ ಎಂದಿರುವ ಚೋಕ್ಸಿ, ಪರಿಸ್ಥಿತಿ ಮೊದಲಿನಂತೆಯೇ ಸುಧಾರಿಸಿದರೆ, ನೌಕರರ ಹಿಂದಿನ ಬಾಕಿಗಳನ್ನು ಪಾವತಿಸಲು ಅವರು ಬದ್ಧರಾಗಿರುವುದಾಗಿ ಹೇಳಿದ್ದಾರೆ. ಅಲ್ಲದೆ, ಅವರು ನೌಕರರಿಗಾಗಿ ಬರೆದಿರುವ ಪತ್ರವು ಇತರರ ದೃಷ್ಟಿಯಲ್ಲಿ ಹಲವು ಬಣ್ಣಗಳನ್ನು ಪಡೆದುಕೊಳ್ಳಬಹುದು, ಆದರೆ ಅವರು ನೌಕರರ ಹಿತದೃಷ್ಟಿಯಿಂದ ಮಾತ್ರ ಪತ್ರ ಬರೆದಿರುವುದಾಗಿ ಪತ್ರದ ಕೊನೆಯಲ್ಲಿ ತಿಳಿಸಿದ್ದಾರೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಕ್ಷತ್ರ ಮತ್ತು ಗೀತಾಂಜಲಿ ಗ್ರೂಪ್'ನ ಮುಖ್ಯ ಹಣಕಾಸು ಅಧಿಕಾರಿ ಕಪಿಲ್ ಖಂಡೇಲ್ವಾಲ್, ಚೋಕ್ಸಿ ನೇತೃತ್ವದ ಗೀತಾಂಜಲಿ ಗ್ರೂಪ್'ನ ವ್ಯವಸ್ಥಾಪಕ ನಿತನ್ ಶಾಹಿ ಅವರನ್ನು ಸಿಬಿಐ ಫೆ.20 ರಂದು ಬಂಧಿಸಲಾಗಿತ್ತು. ಅಲ್ಲದೆ, ಆದಾಯ ತೆರಿಗೆ ಇಲಾಖೆ ಗೀತಾಂಜಲಿ ಜೆಮ್ಸ್ ಮತ್ತು ಶಂಕಿತ ಶೆಲ್ ಕಂಪೆನಿಗಳಿಗೆ ಸೇರಿದ 20 ಕಡೆಗಳಲ್ಲಿ ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿ ನಡೆಸಿತ್ತು.