ನವದೆಹಲಿ: ನಿನ್ನೆ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಸ್ಥಳೀಯ ಉತ್ಪನ್ನಗಳನ್ನು (ಭಾರತದಲ್ಲಿ ತಯಾರಿಸಿದ ಉತ್ಪನ್ನಗಳು) ಬಳಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದರು. ಪಿಎಂ ಮೋದಿಯವರ ಈ ಮನವಿಗೆ ಸಂಬಂಧಿಸಿದಂತೆ ಈಗ ಕೇಂದ್ರ ಗೃಹ ಸಚಿವ ಅಮಿತ್ ಶಾ ದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾರೆ. ಜೂನ್ 1 ರಿಂದ ಸಿಎಪಿಎಫ್ ಕ್ಯಾಂಟೀನ್‌ನಲ್ಲಿ ಸ್ಥಳೀಯ ಸರಕುಗಳನ್ನು ಮಾತ್ರ ಮಾರಾಟ ಮಾಡಲಾಗುವುದು ಎಂದು ಅಮಿತ್ ಶಾ ಹೇಳಿದ್ದಾರೆ. ಹೆಚ್ಚು ಹೆಚ್ಚು ಸ್ಥಳೀಯ ಉತ್ಪನ್ನಗಳನ್ನು ಬಳಸುವಂತೆ ಶಾ ದೇಶಕ್ಕೆ ಮನವಿ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಅಮಿತ್ ಶಾ ಹೇಳಿದ್ದೇನು?
ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, "ನಿನ್ನೆ ಪ್ರಧಾನಿ ದೇಶವನ್ನು ಸ್ವಾವಲಂಭಿಯನ್ನಾಗಿ ಮಾಡಲು ಮತ್ತು ಸ್ಥಳೀಯ ಉತ್ಪನ್ನಗಳನ್ನು (ಭಾರತದಲ್ಲಿ ತಯಾರಿಸಿದ ಉತ್ಪನ್ನಗಳು) ಬಳಸುವಂತೆ ಮನವಿ ಮಾಡಿದ್ದಾರೆ. ಇದು ಮುಂಬರುವ ದಿನಗಳಲ್ಲಿ ಭಾರತ ಜಗತ್ತಿನ ನೇತೃತ್ವ ವಹಿಸಲು ಖಂಡಿತವಾಗಿಯೂ ದಾರಿ ಮಾಡಿಕೊಡಲಿದೆ" ಎಂದು ಹೇಳಿದ್ದಾರೆ.


ಈ ಸಂದರ್ಭದಲ್ಲಿ ಅಮಿತ್ ಶಾ, " ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (CAPF) ಕ್ಯಾಂಟೀನ್ ಗಳಲ್ಲಿ ಇನ್ಮುಂದೆ ಕೇವಲ ಸ್ವದೇಶೀ ಉತ್ಪನ್ನಗಳ ಮಾರಾಟ ಮಾತ್ರ ನಡೆಸಲಾಗುವುದು. ಅಷ್ಟೇ ಅಲ್ಲ ಬರುವ ಜೂನ್ 1, 2020 ರಿಂದ ದೇಶಾದ್ಯಂತ ಇರುವ ಎಲ್ಲಾ CAPF ಕ್ಯಾಂಟೀನ್ ಗಳಿಗೆ ಅನ್ವಯಿಸಲಿದೆ. ಹೀಗಾಗಿ ಇನ್ಮುಂದೆ ದೇಶಾದ್ಯಂತ ಇರುವ ಸುಮಾರು 10 ಲಕ್ಷ CAPF ಸಿಬ್ಬಂದಿಗಳ 50 ಲಕ್ಷ ಕುಟುಂಬಸ್ಥರು ಕೇವಲ ಸ್ವದೇಶಿಯನ್ನೇ ಬಳಸಲಿದ್ದಾರೆ" ಎಂದಿದ್ದಾರೆ.



ಮುಂದಿನ ಐದು ವರ್ಷಗಳಲ್ಲಿ ಭಾರತದ ಪ್ರಜಾಪ್ರಭುತ್ವ ಸ್ವಾವಲಂಭಿಯಾಗಲಿದೆ
ಈ ವೇಳೆ ದೇಶದ ನಾಗರಿಕರಿಗೂ ಕೂಡ ಮನವಿ ಮಾಡಿರುವ ಅಮಿತ್ ಶಾ, "ದೇಶದಲ್ಲಿ ಸ್ಥಳೀಯವಾಗಿ ತಯಾರಿಸಲಾಗಿರುವ ಉತ್ಪನ್ನಗಳನ್ನು ಬಳಸಲು ಮನವಿ ಮಾಡಿದ್ದು, ಇತರರಿಗೂ ಕೂಡ ಸ್ಥಳೀಯವಾಗಿ ತಯಾರಿಸಲಾಗಿರುವ ಉತ್ಪನ್ನಗಳನ್ನು ಬಳಸಲು ಪ್ರೋತ್ಸಾಹಿಸುವಂತೆ ಹೇಳಿದ್ದಾರೆ. ಒಂದು ವೇಳೆ ಪ್ರತಿಯೊಬ್ಬ ಭಾರತೀಯ, ಭಾರತದಲ್ಲಿ ತಯಾರಿಸಲಾದ ಉತ್ಪನ್ನಗಳನ್ನು ಬಳಸುವ ಸಂಕಲ್ಪ ಕೈಗೊಂಡರೆ ಮುಂಬರುವ ಐದು ವರ್ಷಗಳಲ್ಲಿ ದೇಶದ ಪ್ರಜಾಪ್ರಭುತ್ವ ಸ್ವಾವಲಂಭಿಯಾಗಲಿದೆ" ಎಂದು ಹೇಳಿದ್ದಾರೆ.