ಕಾವೇರಿ ನಿರ್ವಹಣಾ ಮಂಡಳಿ: ಕೇಂದ್ರ ಸರ್ಕಾರದ ವಿರುದ್ದ ನ್ಯಾಯಾಂಗ ನಿಂದನೆ ದೂರು ಸಲ್ಲಿಸಿದ ತಮಿಳುನಾಡು
ಆರು ವಾರಗಳಲ್ಲಿ ಸ್ಕೀಂ ರಚಿಸಿ ಎಂದು ಹೇಳಿದ್ದ ಸುಪ್ರೀಂಕೋರ್ಟ್, ಸ್ಕೀಂ ಎಂದರೆ ಮಂಡಳಿ ಎನ್ನುತ್ತಿರುವ ತಮಿಳುನಾಡು.
ನವದೆಹಲಿ: ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ವಿಚಾರವಾಗಿ ಇಂದು ಕೇಂದ್ರ ಸರ್ಕಾರದ ವಿರುದ್ದ ತಮಿಳುನಾಡು ನ್ಯಾಯಾಂಗ ನಿಂದನೆ ದೂರು ಸಲ್ಲಿಸಿದೆ.
ಫೆ. 16 ಕಾವೇರಿ ಜಲವಿವಾದ ಕುರಿತು ತೀರ್ಪು ನೀಡಿದ್ದ ಸುಪ್ರೀಂಕೋರ್ಟ್ ಆರು ವಾರಗಳಲ್ಲಿ ಸ್ಕೀಂ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ಸ್ಕೀಂ ಎಂದರೆ ಮಂಡಳಿ ಎನ್ನುತ್ತಿರುವ ತಮಿಳುನಾಡು, ಸುಪ್ರೀಂಕೋರ್ಟ್ ನೀಡಿದ್ದ ಗಡುವು ಮಾರ್ಚ್ 29ಕ್ಕೆ ಮುಕ್ತಾಯವಾದ ಹಿನ್ನೆಲೆಯಲ್ಲಿ ಇಂದು(ಮಾರ್ಚ್ 31) ಕೇಂದ್ರ ಸರ್ಕಾರದ ವಿರುದ್ದ ನ್ಯಾಯಾಂಗ ನಿಂದನೆ ದೂರು ಸಲ್ಲಿಸಿದೆ. ತಮಿಳುನಾಡು ವಕೀಲ ಶೇಖರ್ ನಫ್ಡೆ ಅವರಿಂದ ದೂರು ಸಲ್ಲಿಸಲಾಗಿದೆ.
ಇಂದು ಸುಪ್ರೀಂ ಕೋರ್ಟ್ ರಿಜಿಸ್ಟ್ರಾರ್ ಕಚೇರಿಯಲ್ಲಿ ದೂರು ದಾಖಲಿಸಿರುವ ತಮಿಳುನಾಡು ಪರ ವಕೀಲರು, ಕರ್ನಾಟಕದ ಚುನಾವಣೆ ದೃಷ್ಟಿಯಿಂದ ಕೇಂದ್ರ ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ದೂರಿನಲ್ಲಿ ಆರೋಪಿಸಿದೆ.
ಸ್ಪಷ್ಟನೆಗಾಗಿ ಕೇಂದ್ರ ಸರ್ಕಾರದ ಮೇಲ್ಮನವಿ
ಕಾವೇರಿ ನದಿ ನೀರು ಹಂಚಿಕೆ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಲ್ಲಿ, ಕಣಿವೆ ವ್ಯಾಪ್ತಿಯ ರಾಜ್ಯಗಳಿಗೆ ನೀರು ಹಂಚಿಕೆಗಾಗಿ ಯೋಜನೆ ರೂಪಿಸಬೇಕು ಎಂದು ಸೂಚಿಸಲಾಗಿದೆ. ಆದರೆ, ಯೋಜನೆ ಎಂದರೆ ಏನು ಎಂಬ ಬಗ್ಗೆ ವಿವರಿಸಿಲ್ಲ. ನದಿ ನೀರು ನಿರ್ವಹಣಾ ಮಂಡಳಿ ರೂಪಿಸುವಂತೆ ತಮಿಳುನಾಡು ಬೇಡಿಕೆ ಇರಿಸಿದೆ. ಮುಂದೆ ಯಾವುದೇ ರೀತಿಯ ಕಾನೂನು ತೊಡಕುಗಳು ಎದುರಾಗುವುದನ್ನು ತಪ್ಪಿಸಲು ಸುಪ್ರೀಂಕೋರ್ಟ್ ಸ್ಪಷ್ಟನೆ ನೀಡಬೇಕೆಂದು ಕೋರಿ ಕೇಂದ್ರ ಸರ್ಕಾರ ಮೇಲ್ಮನವಿ ಸಲ್ಲಿಸಿದೆ.