ನವದೆಹಲಿ: ಲೋಕಸಭೆ ಚುನಾವಣೆ 2019ರ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಆರೋರಾ ಅವರು ಶನಿವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿ, ಚುನಾವಣೆಯಲ್ಲಿ ಆಯ್ಕೆಯಾದ 542 ನೂತನ ಸಂಸದರ ಪಟ್ಟಿಯನ್ನು ಸಲ್ಲಿಸಿದ್ದಾರೆ. ಈ ಮೂಲಕ ನೂತನ ಸರ್ಕಾರ ರಚನಾ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಸರ್ಕಾರ ಈ ಬಗ್ಗೆ ಪ್ರಕಟಣೆ ಬಿಡುಗಡೆ ಮಾಡಿದ್ದು, ಇಂದು ಮಧ್ಯಾಹ್ನ 12.30ಕ್ಕೆ ರಾಷ್ಟ್ರಪತಿಯನ್ನು ಭೇಟಿ ಮಾಡಿದ ಚುನಾವಣಾ ಆಯೋಗದ ತಂಡ ವಿಜೇತರ ಪಟ್ಟಿಯನ್ನು ಸಲ್ಲಿಸಿದೆ. ಈ ಸಂದರ್ಭದಲ್ಲಿ ಚುನಾವಣಾ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಚುನಾವಣಾ ಆಯೋಗಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಭಿನಂದನೆ ಸಲ್ಲಿಸಿದ್ದಾರೆ.



ಈ ಮೂಲಕ 17 ಲೋಕಸಭೆ ರಚನಾ ಪ್ರಕ್ರಿಯೆಗೆ ರಾಷ್ಟ್ರಪತಿಗಳು ಚಾಲನೆ ನೀಡಲು ಅನುವು ಮಾಡಿಕೊಟ್ಟಂತಾಗಿದೆ. ಅಂತೆಯೇ ಶನಿವಾರ ಸಂಜೆ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟದ ನೂತನ ಸಂಸದರು ತಮ್ಮ ನಾಯಕನಾಗಿ ನರೇಂದ್ರ ಮೋದಿ ಅವರನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ. ಬಳಿಕ, ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ನಿಯೋಗವು ಅಧ್ಯಕ್ಷರನ್ನು ಭೇಟಿ ಮಾಡಿ, ಮೋದಿ ಅವರನ್ನು ಪ್ರಧಾನಿಯಾಗಿ ಆಯ್ಕೆ ಮಾಡಬೇಕೆಂದು ಮನವಿ ಸಲ್ಲಿಸಲಿದೆ. ನಂತರ ರಾಷ್ಟ್ರಪತಿ ಕೋವಿಂದ್ ಅವರು ನರೇಂದ್ರ ಮೋದಿ ಅವರನ್ನು ನೂತನ ಸರ್ಕಾರ ರಚನೆಗೆ ಆಹ್ವಾನಿಸಲಿದ್ದಾರೆ.