ನವದೆಹಲಿ: ಪ್ರಾದೇಶಿಕ ಭಾಷೆಗಳಲ್ಲಿ ಬ್ಯಾಂಕಿಂಗ್ ನೇಮಕಾತಿ ಅರ್ಹತಾ ಪರೀಕ್ಷೆ ಬರೆಯಲು ಈಗ ಕೇಂದ್ರ ಸರ್ಕಾರ ಅನುಮತಿ ನೀಡಿ ಮಹತ್ವದ ಘೋಷಣೆ ಹೊರಡಿಸಿದೆ. ಆ ಮೂಲಕ ಕನ್ನಡದಲ್ಲಿ ಬ್ಯಾಕಿಂಗ್ ಪರೀಕ್ಷೆಗಳನ್ನು ನಡೆಸಬೇಕೆಂಬ ಬಹುದಿನಗಳ ಕನ್ನಡಿಗರ ಬೇಡಿಕೆ ಕೂಡ ಈಡೇರಿದಂತಾಗಿದೆ. 



COMMERCIAL BREAK
SCROLL TO CONTINUE READING

ಈ ಹಿಂದೆ ಆರ್.ಆರ್.ಬಿ ಹಾಗೂ ಐಬಿಪಿಎಸ್ ನೇಮಕಾತಿಗಾಗಿ ಪರೀಕ್ಷೆ ಬರೆಯಬೇಕೆಂದರೆ ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಬರೆಯಬೇಕಾಗಿತ್ತು. ಆದರೆ ಕೇಂದ್ರದ ಈ ನಿರ್ಧಾರದಿಂದಾಗಿ ಕನ್ನಡ ಸೇರಿ 13 ಭಾಷೆಗಳಲ್ಲಿ ಈಗ ಪರೀಕ್ಷೆಯನ್ನು ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಘೋಷಿಸಿದ್ದಾರೆ.


ಈಗ ಕನ್ನಡ ಭಾಷೆಯ ಜೊತೆಗೆ ಮಲಯಾಳಂ, ಮಣಿಪುರಿ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಉರ್ದು, ಅಸ್ಸಾಂ, ಬೆಂಗಾಲಿ, ಗುಜರಾತಿ, ಕೊಂಕಣಿ, ಭಾಷೆಯಲ್ಲಿ ಅಭ್ಯರ್ಥಿಗಳು ಬ್ಯಾಂಕಿಂಗ್ ಪರೀಕ್ಷೆ ಬರೆಯಬಹುದಾಗಿದೆ. ಈ ಹಿಂದೆ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಅರ್ಹತಾ ಪರೀಕ್ಷೆಗಳು ಇದ್ದಿದ್ದರಿಂದ ಗ್ರಾಮೀಣ ವಿದ್ಯಾರ್ಥಿಗಳಿಗೆ ಈ ಪರೀಕ್ಷೆಗಳನ್ನು ಎದುರಿಸುವುದು ಸವಾಲಾಗಿತ್ತು. ಈ ಹಿನ್ನಲೆಯಲ್ಲಿ ತಮ್ಮ ಮಾತೃ ಭಾಷೆಯಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ಇದು ಸವಾಲಿನ ಸಂಗತಿಯಾಗಿತ್ತು. ಈಗ ಕೇಂದ್ರ ಸರ್ಕಾರದ ಈ ನಿರ್ಧಾರದಿಂದಾಗಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎನ್ನಲಾಗಿದೆ.