ಕೇಂದ್ರ ಸರ್ಕಾರದಿಂದ ಹೊಸ ವರ್ಷಕ್ಕೆ ಭರ್ಜರಿ ಗಿಫ್ಟ್; ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಇಳಿಕೆ
ಪರಿಷ್ಕೃತ ದರ ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ ಎಂದು ಕೇಂದ್ರಸರ್ಕಾರ ಆದೇಶ ಹೊರಡಿಸಿದೆ.
ನವದೆಹಲಿ: ಹೊಸ ವರ್ಷವನ್ನು ಸ್ವಾಗತಿಸಲು ಕಾತುರರಾಗಿರುವ ದೇಶದ ಜನತೆಗೆ ಕೇಂದ್ರ ಸರ್ಕಾರ ಭರ್ಜರಿ ಕೊಡುಗೆ ನೀಡಿದೆ.
ಹೊಸ ವರ್ಷ ಮುನ್ನಾದಿನ ಎಲ್‌ಪಿಜಿ ಸಿಲಿಂಡರ್ ಗಳ ಬೆಲೆ ಕಡಿಮೆ ಮಾಡಿ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿರುವ ಕೇಂದ್ರ ಸರ್ಕಾರ ಪರಿಷ್ಕೃತ ದರ ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ.
ಸಬ್ಸಿಡಿ ಸಹಿತ 14 ಕೆ.ಜಿ. ತೂಕದ ಸಿಲಿಂಡರ್ ಬೆಲೆಯಲ್ಲಿ 5.91 ರೂ.ಗಳ ಕಡಿತ ಮಾಡಿದ್ದು, ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 120.50 ರೂ. ಕಡಿಮೆ ಮಾಡಲಾಗಿದೆ. ಇನ್ನು, ಸಬ್ಸಿಡಿ ಸಹಿತ ಎಲ್‌ಪಿಜಿ ಸಿಲಿಂಡರ್ 494.99 ರೂ.ಗಳಿಗೆ ಸಿಗಲಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯ ಬೆಲೆಗಳಿಗೆ ಅನುಗುಣವಾಗಿ ಸಿಲಿಂಡರ್ ಬೆಲೆ ಇಳಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ದರ ಪರಿಷ್ಕರಣೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ತೈಲ ಕಂಪನಿ ಪ್ರಕಟಣೆ ತಿಳಿಸಿದೆ.