ಪ್ರಧಾನಿ ಮೋದಿಯವರ ದೂರದೃಷ್ಟಿಗೆ ತೊಂದರೆ: ಸಂವಹನದ ಕೊರತೆಯಿಂದ ಮಾಹಿತಿ ನೀಡಲು ಹಿಂದುಳಿದಿರುವ ಎಚ್ಎಎಲ್
ಒಟ್ಟಾರೆಯಾಗಿ, ಗ್ರೀನ್ ಫೀಲ್ಡ್ ಹೆಲಿಕಾಪ್ಟರ್ ಕಾರ್ಖಾನೆಗೆ ಪ್ರಚಾರದ ಕೊರತೆ ಕಳವಳದ ವಿಚಾರವಾಗಿದ್ದು, ಈ ಯೋಜನೆಯ ಕುರಿತು ಎಚ್ಎಎಲ್‌ನ ಧೋರಣೆಯ ಕುರಿತು ಪ್ರಶ್ನೆಗಳು ಮೂಡುವಂತೆ ಮಾಡಿದೆ. ಎಚ್ಎಎಲ್ ಹಾಗೂ ರಾಜ್ಯ ಸರ್ಕಾರಗಳು ತಕ್ಷಣವೇ ಕ್ರಮ ಕೈಗೊಂಡು, ಈ ಘಟಕಕ್ಕೆ ಸೂಕ್ತ ಪ್ರಚಾರ ನೀಡಬೇಕಿದೆ. ಆ ಮೂಲಕ ಭಾರತದ ಏರೋಸ್ಪೇಸ್ ಉದ್ಯಮಕ್ಕೆ ಅಗತ್ಯ ಉತ್ತೇಜನ ನೀಡಬೇಕಿದೆ.
ಭಾರತದ ಏರೋಸ್ಪೇಸ್ ಉದ್ಯಮದಲ್ಲಿನ ಮಹತ್ವದ ಬೆಳವಣಿಗೆಯಾಗಿ ಗುಜರಾತಿನ ವಡೋದರಾದಲ್ಲಿ ಸಿ-295 ಸಾಗಾಣಿಕಾ ವಿಮಾನ ಉತ್ಪಾದನಾ ಘಟಕದ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಈ ವಿಚಾರಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ವಿಶಾಲ ವರದಿಗಳು ಪ್ರಕಟವಾದವು. ಈ ಕುರಿತು ದೇಶ ವಿದೇಶಗಳ ಜನತೆ ಮಾತನಾಡಿಕೊಂಡಿದ್ದರು. ಈ ಘಟಕದ ಸ್ಥಾಪನೆ ಭಾರತದ ವಾಯುಯಾನ ಉದ್ಯಮದ ಅಭಿವೃದ್ಧಿಗೆ ಹಿಡಿದ ಕೈಗನ್ನಡಿಯಾಗಿದೆ. ಆದರೆ ಇದಕ್ಕೆ ಸಂಪೂರ್ಣವಾಗಿ ವಿರೋಧಾಬಾಸ ಎನ್ನುವಂತೆ ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ಆರಂಭಗೊಳ್ಳುತ್ತಿರುವ ಗ್ರೀನ್ ಫೀಲ್ಡ್ ಹೆಲಿಕಾಪ್ಟರ್ ಕಾರ್ಖಾನೆಯ ಉದ್ಘಾಟನಾ ಸಮಾರಂಭದ ವಿಚಾರ ಇನ್ನೂ ಜನರ ಗಮನಕ್ಕೆ ಬಂದಿಲ್ಲ. ಇದು ಭಾರತದ ಅತಿದೊಡ್ಡ ಹೆಲಿಕಾಪ್ಟರ್ ಉತ್ಪಾದನಾ ಘಟಕವಾಗಿದ್ದರೂ, ವಾಯುಯಾನ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವ ಕುರಿತಾದ ಪ್ರಧಾನಿ ಮೋದಿಯವರ ದೂರದೃಷ್ಟಿಯ ಭಾಗವಾದರೂ, ತುಮಕೂರು ಘಟಕದ ಕುರಿತು ಜನಮನ ಸೆಳೆಯುವ ಕುರಿತಾಗಲಿ, ಪ್ರಚಾರ ಕಾರ್ಯಗಳಾಗಲಿ ಸಮರ್ಪಕವಾಗಿ ನಡೆದಿಲ್ಲ.
ಕರ್ನಾಟಕದ ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ಆರಂಭಗೊಳ್ಳಲಿರುವ ಗ್ರೀನ್ ಫೀಲ್ಡ್ ಹೆಲಿಕಾಪ್ಟರ್ ಕಾರ್ಖಾನೆಯ ಪ್ರಚಾರದ ಕುರಿತಾದ ಆಸಕ್ತಿಯ ಕೊರತೆ ನಿಜಕ್ಕೂ ಕಳವಳದ ವಿಚಾರವಾಗಿದೆ. ಈ ನೂತನ ಘಟಕ ಭಾರತದ ಅತಿದೊಡ್ಡ ಹೆಲಿಕಾಪ್ಟರ್ ಉತ್ಪಾದನಾ ಘಟಕವಾಗಿದ್ದು, ಇದು ಭಾರತದ ಹೆಲಿಕಾಪ್ಟರ್ ಉದ್ಯಮದಲ್ಲಿ ನವ ಕ್ರಾಂತಿಯನ್ನು ಆರಂಭಿಸಲಿದೆ. ಇದು ಹೆಲಿಕಾಪ್ಟರ್ ವಿಚಾರಗಳಿಗೆ ಸಂಬಂಧಿಸಿದಂತೆ ಒಂದೇ ಸೂರಿನಡಿ ಎಲ್ಲ ವ್ಯವಸ್ಥೆಗಳನ್ನೂ ಒದಗಿಸಲಿದೆ. ಆದರೆ ಈ ಕುರಿತಾಗಿ ಎಚ್ಎಎಲ್ ಸಂಸ್ಥೆಯ ಕಾರ್ಪೊರೇಟ್ ಸಂವಹನ ವಿಭಾಗ ಸೂಕ್ತ ಪ್ರಚಾರ ನೀಡದಿರುವುದು ಚಿಂತಿಸಬೇಕಾದ ಅಂಶವಾಗಿದೆ.
ಇದನ್ನೂ ಓದಿ: “ಮುಸ್ಲಿಂ ಸಮುದಾಯಕ್ಕೆ ಜಮೀರ್ ಗಿಂತ ದೊಡ್ಡ ಶತ್ರು ಬೇರೆ ಯಾರೂ ಇಲ್ಲ”- ಎಚ್.ಡಿ.ಕುಮಾರಸ್ವಾಮಿ
ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಎಚ್ಎಎಲ್ ಹೆಲಿಕಾಪ್ಟರ್ ಘಟಕದ ಆರಂಭದ ಕುರಿತು ಯಾವುದೇ ಆಸಕ್ತಿ ಕಂಡುಬರದಿರುವುದು ಸೋಜಿಗವೇ ಸರಿ. ಎಚ್ಎಎಲ್ ಜಾಗತಿಕವಾಗಿ ಈ ಘಟಕದ ಕುರಿತಾದ ಪ್ರಚಾರ ಕೈಗೊಳ್ಳಲು ಸೂಕ್ತ ಕ್ರಮ ಕೈಗೊಂಡಿಲ್ಲ ಎನ್ನುವುದನ್ನೂ ಇದು ಸಾಬೀತುಪಡಿಸುತ್ತದೆ. ಕೇವಲ ಭಾರತ ಸರ್ಕಾರದ ವಾರ್ತಾ ಇಲಾಖೆ ಘಟಕದ ಕುರಿತಾದ ಪತ್ರಿಕಾ ಹೇಳಿಕೆಯನ್ನು ಪ್ರಕಟಿಸಿದೆ. ಎಚ್ಎಎಲ್ ಸಂಸ್ಥೆಯ ಅಧಿಕೃತ ಜಾಲತಾಣದಲ್ಲೂ ಡಿಸೆಂಬರ್ 2022ರ ಬಳಿಕ ಯಾವುದೇ ಅಧಿಕೃತ ಮಾಧ್ಯಮ ಪ್ರಕಟಣೆಗಳು ಕಂಡುಬಂದಿಲ್ಲ. ಅದರೊಡನೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಉದ್ಘಾಟನೆ ನಡೆಸುವ ಕುರಿತಾದ ಮಾಹಿತಿಗಳೂ ಲಭ್ಯವಿಲ್ಲ. ಇದು ನಿಜಕ್ಕೂ ಗಮನಿಸಬೇಕಾದ ವಿಚಾರವಾಗಿದ್ದು, ಈ ಯೋಜನೆ ಮತ್ತು ಪ್ರಧಾನಿಯವರ ಪರಿಶ್ರಮದ ಕುರಿತಾದ ಪರಿಶ್ರಮಕ್ಕೆ ಬೆಲೆ ಇಲ್ಲವೇನೋ ಎಂಬ ಭಾವನೆ ಮೂಡಿಸುತ್ತದೆ.
ಪ್ರಧಾನಿ ನರೇಂದ್ರ ಮೋದಿಯವರು ಭಾರತದ ಏರೋಸ್ಪೇಸ್ ಉದ್ಯಮವನ್ನು ಅಭಿವೃದ್ಧಿ ಪಡಿಸುವುದನ್ನು ಪ್ರಮುಖ ಆದ್ಯತೆಯನ್ನಾಗಿ ಮಾಡಿರುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಗ್ರೀನ್ ಫೀಲ್ಡ್ ಹೆಲಿಕಾಪ್ಟರ್ ಕಾರ್ಖಾನೆ ಈ ಯೋಜನೆಯ ಪ್ರಮುಖ ಪಾತ್ರವಾಗಿದ್ದು, ಉದ್ಯೋಗ ಸೃಷ್ಟಿಸಲು, ಆರ್ಥಿಕತೆಯನ್ನು ಉತ್ತೇಜಿಸಲು, ಹಾಗೂ ಏರೋಸ್ಪೇಸ್ ಉದ್ಯಮದಲ್ಲಿ ಭಾರತದ ಸಾಮರ್ಥ್ಯವನ್ನು ಹೆಚ್ಚಿಸಲು ಅತ್ಯಂತ ಮಹತ್ವದ್ದಾಗಿದೆ. ಆದರೆ ಈ ಯೋಜನೆಯ ಕುರಿತಾದ ಪ್ರಚಾರ ನಡೆಸುವಲ್ಲಿ ಎಚ್ಎಎಲ್‌ನ ವೈಫಲ್ಯ ಈ ಹೆಲಿಕಾಪ್ಟರ್ ಉತ್ಪಾದನಾ ಘಟಕದ ಕುರಿತು ತಾನಿನ್ನೂ ಸಂಪೂರ್ಣವಾಗಿ ತೊಡಗಿಸಿಕೊಂಡಿಲ್ಲ ಎಂಬ ಸಂದೇಶ ನೀಡುತ್ತಿದೆ.
ಎಚ್ಎಎಲ್ ಈ ಘಟಕದ ಉದ್ಘಾಟನೆಯ ಕುರಿತು ಪ್ರಚಾರ ನಡೆಸದಿರುವುದರ ಜೊತೆಗೆ, ಕರ್ನಾಟಕ ಸರ್ಕಾರವೂ ಇಂತಹ ಮಹತ್ವದ ಯೋಜನೆ ರಾಜ್ಯದಲ್ಲಿ ಆರಂಭವಾಗುತ್ತಿರುವ ಕುರಿತು ಮೌನವಾಗಿರುವುದು ಸಹ ಪ್ರಶ್ನಾರ್ಹ ಅಂಶವಾಗಿದೆ. ಗ್ರೀನ್ ಫೀಲ್ಡ್ ಹೆಲಿಕಾಪ್ಟರ್ ಕಾರ್ಖಾನೆ ಕರ್ನಾಟಕ ರಾಜ್ಯಕ್ಕೆ ಒಂದು ಮಹತ್ವದ ಯೋಜನೆಯಾಗಿದೆ. ಈ ಯೋಜನೆ ಸ್ಥಳೀಯ ಆರ್ಥಿಕತೆಗೆ ಉತ್ತೇಜನ ನೀಡಿ, ಉದ್ಯೋಗಾವಕಾಶಗಳನ್ನೂ ಸೃಷ್ಟಿಸಲಿದೆ. ಈ ಯೋಜನೆಯ ಕುರಿತಾಗಿ ನೀರಸ ಪ್ರತಿಕ್ರಿಯೆ ತೋರುವ ಮೂಲಕ ರಾಜ್ಯ ಸರ್ಕಾರ ಇದಕ್ಕೆ ತನ್ನ ಬೆಂಬಲ ನೀಡುವಲ್ಲಿ ವಿಫಲವಾಗಿದೆ. ಅದರೊಡನೆ ಇಡೀ ರಾಷ್ಟ್ರಕ್ಕೆ ನಾವು ಪ್ರಧಾನಿ ಮೋದಿಯವರ ಯೋಜನೆಗೆ ಸಂಪೂರ್ಣ ಬೆಂಬಲ ನೀಡುತ್ತಿದ್ದೇವೆ ಎಂಬ ಸಂದೇಶ ನೀಡುವ ಅವಕಾಶವನ್ನೂ ಕರ್ನಾಟಕ ಸರ್ಕಾರ ಕಳೆದುಕೊಳ್ಳುತ್ತಿದೆ.
ಇದನ್ನೂ ಓದಿ: ಉಂಡ ಮನೆಯ ಗಳ ಇರಿಯುವ ಜಮೀರ್ ಅಹ್ಮದ್: ಜೆಡಿಎಸ್ ಆಕ್ರೋಶ
ರಾಜ್ಯ ಸರ್ಕಾರದ ಅಸಮರ್ಪಕತೆ ತುಮಕೂರು ಪ್ರಾಂತ್ಯದೆಡೆ ದೇಶದ ಗಮನ ಸೆಳೆಯಲು ಮತ್ತು ರಾಜ್ಯವನ್ನು ಏರೋಸ್ಪೇಸ್ ಕ್ಷೇತ್ರದ ತಾಣವಾಗಿ ರೂಪಿಸುವ ಅಪೂರ್ವ ಅವಕಾಶ ಕೈತಪ್ಪಿ ಹೋಗುವಂತೆ ಮಾಡುತ್ತಿದೆ. ಗ್ರೀನ್ ಫೀಲ್ಡ್ ಹೆಲಿಕಾಪ್ಟರ್ ಕಾರ್ಖಾನೆ ಮತ್ತು ಪ್ರಧಾನಿ ಮೋದಿಯವರ ಪ್ರಯತ್ನಗಳನ್ನು ಬೆಂಬಲಿಸಲು ವಿಫಲವಾಗುವ ಮೂಲಕ, ಕರ್ನಾಟಕ ಸರ್ಕಾರ ರಾಜ್ಯದ ಅಭಿವೃದ್ಧಿಯನ್ನು ಮತ್ತು ಒಟ್ಟಾರೆಯಾಗಿ ಏರೋಸ್ಪೇಸ್ ಉದ್ಯಮವನ್ನು ಬೆಂಬಲಿಸುವ ಕರ್ತವ್ಯವನ್ನೂ ನಿರ್ಲಕ್ಷಿಸುತ್ತಿದೆ. ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ತಕ್ಷಣವೇ ಕ್ರಮ ಕೈಗೊಂಡು, ಪ್ರಧಾನಿಯವರ ದೂರದೃಷ್ಟಿ ಮತ್ತು ಗ್ರೀನ್ ಫೀಲ್ಡ್ ಹೆಲಿಕಾಪ್ಟರ್ ಕಾರ್ಖಾನೆಗೆ ಬೆಂಬಲ ನೀಡಬೇಕು.
ಒಂದು ವೇಳೆ ಈ ಯೋಜನೆಗೆ ಪ್ರಚಾರ ನೀಡುವಲ್ಲಿನ ವಿಫಲತೆ ಸಾಮಾನ್ಯ ನಿರ್ಲಕ್ಷ್ಯದ ವರ್ತನೆಯೋ ಅಥವಾ ಪ್ರಧಾನಿಯವರ ಪ್ರಯತ್ನಗಳನ್ನು ವಿಫಲಗೊಳಿಸುವ ಹುನ್ನಾರವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅದು ಏನೇ ಆದರೂ, ಇದು ದೇಶದ ಏರೋಸ್ಪೇಸ್ ಉದ್ಯಮಕ್ಕೆ ಹಾನಿಕರವಾಗಿದ್ದು, ಅಕ್ಷಮ್ಯ ವರ್ತನೆಯಾಗಿದೆ. ಎಚ್ಎಎಲ್ ಸಹ ತಕ್ಷಣವೇ ಮುಂದೆ ಬಂದು, ಗ್ರೀನ್ ಫೀಲ್ಡ್ ಹೆಲಿಕಾಪ್ಟರ್ ಕಾರ್ಖಾನೆಯ ಕುರಿತು ಜಗತ್ತಿಗೆ ಪ್ರಚಾರ ನಡೆಸಬೇಕಿದೆ. ಜೊತೆಗೆ ಪ್ರಧಾನಿ ಮೋದಿಯವರ ಪರಿಕಲ್ಪನೆಗಳಿಗೆ ಬೆಂಬಲ ನೀಡುವ ಅಗತ್ಯವಿದೆ.
ಒಟ್ಟಾರೆಯಾಗಿ, ಗ್ರೀನ್ ಫೀಲ್ಡ್ ಹೆಲಿಕಾಪ್ಟರ್ ಕಾರ್ಖಾನೆಗೆ ಪ್ರಚಾರದ ಕೊರತೆ ಕಳವಳದ ವಿಚಾರವಾಗಿದ್ದು, ಈ ಯೋಜನೆಯ ಕುರಿತು ಎಚ್ಎಎಲ್‌ನ ಧೋರಣೆಯ ಕುರಿತು ಪ್ರಶ್ನೆಗಳು ಮೂಡುವಂತೆ ಮಾಡಿದೆ. ಎಚ್ಎಎಲ್ ಹಾಗೂ ರಾಜ್ಯ ಸರ್ಕಾರಗಳು ತಕ್ಷಣವೇ ಕ್ರಮ ಕೈಗೊಂಡು, ಈ ಘಟಕಕ್ಕೆ ಸೂಕ್ತ ಪ್ರಚಾರ ನೀಡಬೇಕಿದೆ. ಆ ಮೂಲಕ ಭಾರತದ ಏರೋಸ್ಪೇಸ್ ಉದ್ಯಮಕ್ಕೆ ಅಗತ್ಯ ಉತ್ತೇಜನ ನೀಡಬೇಕಿದೆ.
-ಗಿರೀಶ್ ಲಿಂಗಣ್ಣ
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.