ನವಂಬರ್ 14 ಭಾರತದಲ್ಲೆಡೆ ಎರಡು ವಿಶಿಷ್ಟ ಸಂಗತಿಗಳನ್ನು ಸ್ಮರಿಸುವ ದಿನ. ಇದರಲ್ಲಿ ಒಂದು ಭಾರತದ ಪ್ರಥಮ ಪ್ರಧಾನ ಮಂತ್ರಿಯಾದ ಪಂಡಿತ್ ಜವಾಹರಲಾಲ್ ನೆಹರು ರವರ ಜನ್ಮದಿನಚಾರಣೆ, ಇನ್ನೊಂದೆಡೆಗೆ ರಾಷ್ಟ್ರೀಯ ಮಕ್ಕಳ ದಿನಾಚರಣೆ- ಇವರೆಡು ದಿನಾಚರಣೆಗಳು ಒಂದೇ ದಿನ ಆಚರಿಸುವುದರ ಹಿನ್ನಲೆಯಂತು ಅತ್ಯಂತ  ಕುತೂಹಲಕಾರಿಯಾಗಿದೆ.


COMMERCIAL BREAK
SCROLL TO CONTINUE READING

ಜಾಗತಿಕವಾಗಿ ವಿಶ್ವಸಂಸ್ಥೆಯು ನವಂಬರ್ 20 ನ್ನು ಮಕ್ಕಳ ದಿನಾಚರಣೆಯನ್ನಾಗಿ  1954ರಿಂದ ಆಚರಿಸಿಕೊಂಡು ಬರಲಾಗುತ್ತಿದೆ ಆದರೆ 1964 ರಲ್ಲಿ ನೆಹರು ನಿಧನದ ನಂತರ ಅವರ ಜನ್ಮ ದಿನವನ್ನು  ಭಾರತದಲ್ಲಿ ರಾಷ್ಟ್ರೀಯ ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಆದರೆ ಇದರ ಹಿಂದೆ  ಮುಖ್ಯವಾಗಿ  ವಿ.ಎನ್. ಕುಲಕರ್ಣಿಯವರ ಶ್ರಮ ಮಹತ್ತರವಾದದ್ದು. ಕಾರಣ 1951 ರಲ್ಲಿ ಇವರು ವಿಶ್ವ ಸಂಸ್ಥೆಯ ಯೋಜನೆಯೊಂದರಲ್ಲಿ ಇಂಗ್ಲೆಂಡಿನ ಮಕ್ಕಳ ಸ್ಥಿತಿಗತಿಗಳ ಬಗ್ಗೆ ಮತ್ತು ಅವರ ಕಲ್ಯಾಣಕ್ಕಾಗಿ ಶ್ರಮಿಸುತಿದ್ದರು. ಈ ಸಂದರ್ಭದಲ್ಲಿ ಭಾರತೀಯರಾಗಿದ್ದ ಕುಲಕರ್ಣಿಯವರು ಸಹಜವಾಗಿ ಭಾರತದ ಮಕ್ಕಳಿಗೋಸ್ಕರ ಏನನ್ನಾದರೂ ಮಾಡಬೇಕೆಂಬ ಹಂಬಲ, ಅವರನ್ನು ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರನ್ನಾಗಿ ಮಾಡಿತ್ತು. ಆ ಸಂಧರ್ಭದಲ್ಲಿ ಭಾರತದ ಪ್ರಧಾನಮಂತ್ರಿಗಳಾಗಿದ್ದ ನೆಹರು ಮುಂದೆ ಅವರು  ರಾಷ್ಟ್ರೀಯ ಮಕ್ಕಳ ದಿನಾಚರಣೆಯ  ಆಚರಿಸುವ ಸಲಹೆಯೊಂದನ್ನು ಇಟ್ಟರು.


"ಮೊದಲೇ ಮಕ್ಕಳೆಂದರೆ ಸದಾ ಕ್ರಿಯಾಶೀಲರಾಗುವ ನೆಹರು"ರವರು ಇದಕ್ಕೆ ಸಂತಸದಿಂದ  ಒಪ್ಪಿಗೆ ನೀಡಿದರು. ಮಕ್ಕಳ ಮೇಲೆ ಅವರು ತೋರಿಸುತ್ತಿದ್ದ ಅಪಾರ ಪ್ರೀತಿಯಿಂದಾಗಿಯೇ ಇಡೀ ದೇಶ ಇಂದಿಗೂ ಕೂಡಾ ಅವರನ್ನು ಚಾಚಾ ನೆಹರು ಎಂದೇ ಸ್ಮರಿಸುತ್ತದೆ.


ಅಲ್ಲದೆ ಅವರು ಭಾರತ ಸ್ವತಂತ್ರಗೊಂಡ ನಂತರ  ಮಕ್ಕಳಿಗೆ  ಆಧುನಿಕ ದೇಶವನ್ನು  ನಿರ್ಮಾಣ ಮಾಡಲು ಪೂರಕವಾದ ವಾತಾವರಣವನ್ನು ಸಹಿತ ಸೃಷ್ಟಿಸಿದರು. ಇದರ ಪ್ರತಿಫಲವಾಗಿ ಐಐಟಿ, ಏಮ್ಸ್ ಹಾಗೂ ಹೊಸ ತಾಂತ್ರಿಕ ಮತ್ತು ಶೈಕ್ಷಣಿಕ ಸಂಸ್ಥೆಗಳು ಇಂಥ ಮಕ್ಕಳ ಮತ್ತು ಯುವ ಪೀಳಿಗೆಯ ಮೇಲಿನ  ಪ್ರೀತಿಯ ಬಳುವಳಿಯಾಗಿ ಬೆಳೆದು ಬಂದಂತಹ ಸಂಸ್ಥೆಗಳಾಗಿವೆ. 


ಒಂದು ಕಡೆ ನೆಹರುರವರು  ಮಕ್ಕಳ ಮಹತ್ವವನ್ನು ಸಾರುತ್ತಾ "ಮಕ್ಕಳು ಹೂತೋಟದಲ್ಲಿರುವ ಮೊಗ್ಗುಗಳಂತೆ ಆದರಿಂದ ಅವರನ್ನು ಪ್ರೀತಿ ಮತ್ತು ಆರೈಕೆಯಿಂದ ಬೆಳೆಸಬೇಕು ಮತ್ತು ಮುಂದೆ ಅವರೇ ಈ ದೇಶದ ಭವಿಷ್ಯದ ಭಾವಿ ಪ್ರಜೆಗಳಾಗುತ್ತಾರೆ" ಎಂದರು. ನೆಹರು ಯಾವಾಗಲೂ ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ, ಸೌಹಾರ್ಧತೆ, ಧರ್ಮ ನಿರಪೇಕ್ಷತೆ, ಸಾಮಾಜಿಕ ಕಳಕಳಿ ಮುಂತಾದ ವಿಚಾರಗಳಿಗೆ ಹೆಚ್ಚು ಒತ್ತನ್ನು ನೀಡಿದರು. ಇದರ ಪ್ರತಿಫಲನವನ್ನು  ನಾವು ಅವರ ಆಡಳಿತ ಅವಧಿಯಲ್ಲಿ ತಂದಂತ ಕ್ರಾಂತಿಕಾರಕ ಬೆಳವಣಿಗೆಗಳ ಮೂಲಕ ಕಾಣಬಹುದು. ಪ್ರತಿಷ್ಠಿತ ವಿವಿಗಳು, ವಿಜ್ಞಾನ ಸಂಸ್ಥೆಗಳೆಲ್ಲವೂ ಸಹಿತ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಜಾರಿಗೆ ತಂದಂತವುಗಳು. ಇಂತಹ ಗುರುತರ ಜವಾಬ್ದಾರಿಯನ್ನು ನಿಭಾಯಿಸಿದ ನೆಹರುರವರ ಕಾರ್ಯ ನಿಜಕ್ಕೂ ಶ್ಲಾಘನೀಯ. ಆದ್ದರಿಂದ ನವಂಬರ್ 14 ಮಕ್ಕಳ ದಿನಾಚಾರಣೆಯನ್ನಾಗಿ ಆಚರಿಸುವುದು ಒಂದರ್ಥದಲ್ಲಿ ನೆಹರು ಕಂಡ ಆಧುನಿಕ ಭಾರತ ಕನಸನ್ನು ಮುಂದುವರೆಸುವ ಭಾಗವಾಗಿರುವ ಸಂಗತಿ ಎಂಬುದು ಗಮನಾರ್ಹವಾದುದು.