ಕೋಲ್ಕತ್ತಾ: ಇಲ್ಲಿನ ವಿಕ್ಟೋರಿಯಾ ಸ್ಮಾರಕದ ಮೇಲೆ ಕ್ಯಾಮರಾ ಅಳವಡಿಸಲಾದ ಡ್ರೋನ್ ಹಾರಿಸಿ ಫೋಟೋಗಳನ್ನು ಕ್ಲಿಕ್ಕಿಸಿದ ಆರೋಪದ ಮೇಲೆ ಚೀನಾ ಪ್ರಜೆಯನ್ನು ಬಂಧಿಸಲಾಗಿದೆ ಎಂದು ಕೊಲ್ಕತ್ತಾ ಪೊಲೀಸರು ಭಾನುವಾರ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಭಾರತೀಯ ಸೇನೆಯ ಪೂರ್ವ ಕಮಾಂಡ್ ಪ್ರಧಾನ ಕಚೇರಿಯಾದ ಫೋರ್ಟ್ ವಿಲಿಯಂ ಹತ್ತಿರವಿರುವ  ಈ ಸ್ಮಾರಕದ ಮೇಲೆ ಲಿ ಝಿವಾಯಿ ಎಂಬ ಚೀನಾ ಪ್ರಜೆ ಡ್ರೋನ್ ಹಾರಿಸಿ ಛಾಯಾಚಿತ್ರಗಳನ್ನು ಕ್ಲಿಕ್ಕಿಸಿದ್ದ ಎನ್ನಲಾಗಿದೆ. ಬಂಧಿತ ವ್ಯಕ್ತಿಯನ್ನು ಶನಿವಾರ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಬಂಧಿಸಿ, ಬಳಿಕ ಕೊಲ್ಕತ್ತಾ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಆರೋಪಿಯನ್ನು ಮಾರ್ಚ್ 25 ರವರೆಗೆ ಪೊಲೀಸ್ ಬಂಧನಕ್ಕೆ ಒಪ್ಪಿಸಲಾಗಿದೆ. 


ಚೀನಾದಲ್ಲಿನ ಷೆನ್ಜೆನ್ ನಗರದ ನಿವಾಸಿ ಝಿವೇವಿ(34) ಎಂಬಾತ ವಿಕ್ಟೋರಿಯಾ ಸ್ಮಾರಕದ ಆವರಣದಲ್ಲಿ ಡ್ರೋನ್ ಗೆ ಒಂದು ಕ್ಯಾಮರಾವನ್ನು ಅಳವಡಿಸಿ, ರಿಮೋಟ್ ಕಂಟ್ರೋಲ್ ಮತ್ತು ಮೊಬೈಲ್ ಸಹಾಯದಿಂದ ಯಾವುದೇ ಅನುಮತಿ ಪಡೆಯದೇ ಸ್ಮಾರಕದ ಛಾಯಾಚಿತ್ರಗಳನ್ನು ಎಲ್ಲಾ ದಿಕ್ಕುಗಳಿಂದಲೂ ಕ್ಲಿಕ್ ಮಾಡುತ್ತಿದ್ದ ಸಂದರ್ಭದಲ್ಲಿ ಸಿಐಎಸ್ಎಫ್ ಸಿಬ್ಬಂದಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.