ಪುತ್ರ ಚಿರಾಗ್ ಗೆ ಕೇಂದ್ರ ಮಂತ್ರಿ ಪಟ್ಟ , ಫಲಿತಾಂಶಕ್ಕೂ ಮೊದಲೇ ಪಾಸ್ವಾನ್ ಬೇಡಿಕೆ ...!
ಕೇಂದ್ರದಲ್ಲಿ ಮತ್ತೆ ಎನ್ ಡಿ ಎ ಒಕ್ಕೂಟ ಅಧಿಕಾರಕ್ಕೆ ಬರಲಿದೆ ಎಂದು ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಭರವಸೆ ವ್ಯಕ್ತಪಡಿಸಿದ್ದಾರೆ.ತಮ್ಮ ಮಗ ಕೇಂದ್ರದ ಸಚಿವ ಸಂಪುಟದಲ್ಲಿ ಸೇರಲಿದ್ದಾರೆ ಎನ್ನುವ ಮುನ್ಸೂಚನೆಯನ್ನು ಲೋಕಸಭಾ ಅಂತಿಮ ಫಲಿತಾಂಶಕ್ಕೆ ಮುನ್ನ ನೀಡಿದ್ದಾರೆ.
ನವದೆಹಲಿ: ಕೇಂದ್ರದಲ್ಲಿ ಮತ್ತೆ ಎನ್ ಡಿ ಎ ಒಕ್ಕೂಟ ಅಧಿಕಾರಕ್ಕೆ ಬರಲಿದೆ ಎಂದು ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಭರವಸೆ ವ್ಯಕ್ತಪಡಿಸಿದ್ದಾರೆ.ತಮ್ಮ ಮಗ ಕೇಂದ್ರದ ಸಚಿವ ಸಂಪುಟದಲ್ಲಿ ಸೇರಲಿದ್ದಾರೆ ಎನ್ನುವ ಮುನ್ಸೂಚನೆಯನ್ನು ಲೋಕಸಭಾ ಅಂತಿಮ ಫಲಿತಾಂಶಕ್ಕೆ ಮುನ್ನ ನೀಡಿದ್ದಾರೆ.
ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ರಾಮ್ ವಿಲಾಸ್ ಪಾಸ್ವಾನ್ "ಯಾವ ತಂದೆ ಮಗನನ್ನು ಮುಂದೆ ಹೋಗಲು ಬಯಸುವುದಿಲ್ಲ ಹೇಳಿ" ಎಂದು ಮಗ ಚಿರಾಗ್ ಪಾಸ್ವಾನ್ ಕೇಂದ್ರ ಮಂತ್ರಿಯಾಗುವ ಬಗ್ಗೆ ಉತ್ತರಿಸಿದರು. ಮಂಗಳವಾರದಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕರೆದಿದ್ದ ಎನ್ ಡಿ ಎ ಮೈತ್ರಿಕೂಟದ ವಿಶೇಷ ಭೋಜನ ಕಾರ್ಯಕ್ರಮದಲ್ಲಿ ಪಾಸ್ವಾನ್ ಕೂಡ ಭಾಗವಹಿಸಿದ್ದರು.
ಸದ್ಯ 36 ರ ಹರೆಯದ ಚಿರಾಗ್ ಪಾಸ್ವಾನ್ ಬಿಹಾರದ ಜಾಮುಯಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಅವರು ಲೋಕ ಜನಶಕ್ತಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಹಿಂದೆ ಎನ್ಡಿಎ ಸರ್ಕಾರದಲ್ಲಿದ್ದರೂ ಕೂಡ ಹಲವಾರು ಸರ್ಕಾರದ ನಿರ್ಧಾರಗಳಿಗೆ ಚಿರಾಗ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.
ವಿಶೇಷವೆಂದರೆ ರಾಮ್ ವಿಲಾಸ್ ಪಾಸ್ವಾನ್ ಬಹುತೇಕ ಮೈತ್ರಿ ಸರ್ಕಾರದ ಪಾಲುದಾರರಾಗಿರುವ ಖ್ಯಾತಿಯನ್ನು ಹೊಂದಿದ್ದಾರೆ.ಅದು ಬಿಜೆಪಿಯಾಗಿರಬಹುದು ಅಥವಾ ಕಾಂಗ್ರೆಸ್ ಆಗಿರಬಹುದು ಎಲ್ಲ ಪಕ್ಷಗಳ ಸರ್ಕಾರದಲ್ಲಿ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ.