ನವದೆಹಲಿ:ಪೌರತ್ವ (ತಿದ್ದುಪಡಿ) ಕಾಯ್ದೆ-2019 ಅನ್ನು ವಿರೋಧಿಸಿ ಪೂರ್ವೋತ್ತರ ರಾಜ್ಯಗಳಲ್ಲಿ ಮತ್ತು ಪಶ್ಚಿಮ ಬಂಗಾಳ ನಡೆಯುತ್ತಿದ್ದ ಹಿಂಸಾತ್ಮಕ ಪ್ರತಿಭಟನೆ ಇದೀಗ ದೆಹಲಿಗೂ ವ್ಯಾಪಿಸಿದೆ. ದೆಹಲಿಯ ಜಾಮಿಯಾ ಮತ್ತು ಶಾಹೀನ್ ಬಾಗ್ ಪ್ರದೇಶಗಳಲ್ಲಿ ಹಿಂಸಾತ್ಮಕ ಪ್ರತಿಭಟನೆ ಆರಂಭಗೊಂಡಿದೆ. ಕಾಯ್ದೆಯನ್ನು ವಿರೋಧಿಸಿರುವ ಪ್ರತಿಭಟನಾಕಾರರು, ಜಾಮಿಯಾಗೆ ಹೊಂದಿಕೊಂಡಂತೆ ಇರುವ ಜಸೋಲಾ ಬಳಿ ಮೂರು ಬಸ್ ಗಳಿಗೆ ಬೆಂಕಿ ಇಟ್ಟಿದ್ದಾರೆ. ಅಷ್ಟೇ ಅಲ್ಲ ಈ ಅಗ್ನಿ ನಂದಿಸಲು ಸ್ಥಳಕ್ಕೆ ಧಾವಿಸಿದ್ದ ನಾಲ್ಕು ಅಗ್ನಿಶಾಮಕ ಸಿಬ್ಬಂದಿಯ ವಾಹನಗಳ ಮೇಲೂ ಕೂಡ ಹಲ್ಲೆ ನಡೆಸಿದ್ದಾರೆ. ಈ ವೇಳೆ ಹಿಂಸಾಚಾರಕ್ಕೆ ಮುಂದಾಗಿರುವ ಜನರು ಅಗ್ನಿಶಾಮಕ ಸಿಬ್ಬಂದಿಗಳ ಮೇಲೂ ಕೂಡ ಹಲ್ಲೆ ನಡೆಸಿದ್ದಾರೆ. ಈ ಹಲ್ಲೆಯಲ್ಲಿ ಇಬ್ಬರು ಅಗ್ನಿಶಾಮಕ ಸಿಬ್ಬಂದಿಗಳಿಗೆ ಗಂಭೀರ ಗಾಯಗಳಾಗಿವೆ. 


COMMERCIAL BREAK
SCROLL TO CONTINUE READING

ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯ ಪರಿಸರದಲ್ಲಿ ನಡೆದ ಈ ಉಗ್ರ ಪ್ರತಿಭಟನೆಯ ಹಿನ್ನೆಲೆ ಸರಿತಾ ವಿಹಾರ್-ಕಾಲಿಂದಿ ಕುಂಜ್ ರಸ್ತೆಯ ಎರಡು ಬದಿ ಟ್ರಾಫಿಕ್ ಜಾಮ್ ಆಗಿದೆ. ಖಾಸಗಿ ವಾಹನಗಳನ್ನು ಸೇರಿದಂತೆ ಸರ್ಕಾರಿ ಆಸ್ತಿಗಳಿಗೂ ಸಹ ಪ್ರತಿಭಟನಾಕಾರರು ಹಾನಿ ಮುಟ್ಟಿಸಿದ್ದಾರೆ.


ಈ ಪ್ರತಿಭಟನೆಗೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ದೆಹಲಿ ಪೊಲೀಸರು ಟ್ರಾಫಿಕ್ ಅಲರ್ಟ್ ಜಾರಿಗೊಳಿಸಿದ್ದು, ಪ್ರತಿಭಟನೆಯ ಕಾರಣ ಒಖಲಾ ಅಂಡರ್ ಪಾಸ್ ನಿಂದ ಸರಿತಾ ವಿಹಾರ್ ವರೆಗಿನ ರಸ್ತೆ ಬಂದ್ ಮಾಡಲಾಗಿದೆ ಎಂದು ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾರೆ.



ಶುಕ್ರವಾರ ವಿಶ್ವವಿದ್ಯಾಲಯದ ಪರಿಸರದಲ್ಲಿ ವಿವಾದಾತ್ಮಕ ಪೌರತ್ವ (ತಿದ್ದುಪಡಿ) ಕಾಯ್ದೆ-2019 ಅನ್ನು ವಿರೋಧಿಸಿ ಸಂಸದರು ಮಾರ್ಚ್ ನಡೆಸಲು ಯತ್ನಿಸಿದ ವೇಳೆ ಪರಿಸರದಲ್ಲಿನ ವಾತಾವರಣ ಉದ್ವಿಘ್ನಗೊಂಡಿದ್ದು ಇಲ್ಲಿ ಉಲ್ಲೇಖನೀಯ. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾ ನಿರತರ ನಡುವೆ ತೀವ್ರ ಚಕಮಕಿ ನಡೆದಿತ್ತು.


ಸದ್ಯ ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಧಾವಿಸಿರುವ ಭದ್ರತಾ ಪಡೆಗಳು ಹಿಂಸಾತ್ಮಕ ಪ್ರತಿಭಟನೆ ನಡೆಸುತ್ತಿದ್ದ ಕಿಡಿಗೇಡಿಗಳನ್ನು ಚದುರಿಸುವಲ್ಲಿ ನಿರತರಾಗಿದ್ದಾರೆ. ಇನ್ನೊಂದೆಡೆ ದಾಂಧಲೆ ನಡೆಸಲು ಮುಂದಾಗಿರುವ ನಾಗರಿಕರಿಗೆ ಕಾನೂನು ಕೈಗೆತ್ತಿಕೊಳ್ಳದಂತೆ ಪೊಲೀಸ್ ಹಿರಿಯ ಅಧಿಕಾರಿಗಳು ಮನವಿ ಮಾಡಿಕೊಳ್ಳುತ್ತಿದ್ದಾರೆ.