ನವದೆಹಲಿ: ಲೈನ್ ಆಫ್ ಆಕ್ಚ್ಯುವಲ್ ಕಂಟ್ರೋಲ್ ಬಳಿ ಭಾರತೀಯ ಸೈನಿಕರು ಹಾಗೂ ಚೀನಾ ಸೈನಿಕರ ಮಧ್ಯೆ ಘರ್ಷಣೆ ಸಂಭವಿಸಿದೆ. ಈ ಕುರಿತು ಮಾಹಿತಿ ನೀಡಿರುವ ಸೇನಾ ಮೂಲಗಳು ನಿನ್ನೆ ರಾತ್ರಿ ಗಾಲ್ವಾನ್ ಕಣಿವೆಯಲ್ಲಿ ಡಿಎಸ್ಕಲೆಶನ್ ಪ್ರಕ್ರಿಯೇ ನಡೆಯುತ್ತಿದ್ದ ವೇಳೆ ಈ ಘರ್ಷಣೆ ಸಂಭವಿಸಿದ್ದು, ಘರ್ಷಣೆಯಲ್ಲಿ ಇಬ್ಬರು ಭಾರತೀಯ ಜವಾನರು ಹಾಗೂ ಓರ್ವ ಅಧಿಕಾರಿ ಹುತಾತ್ಮರಾಗಿದ್ದಾರೆ



COMMERCIAL BREAK
SCROLL TO CONTINUE READING

1967ರ ಬಳಿಕೆ ಇದೆ ಮೊದಲ ಬಾರಿಗೆ ಭಾರತ-ಚೀನಾ ಸೈನಿಕರ ನಡುವೆ ಹಿಂಸಾತ್ಮಕ ಘರ್ಷಣೆ ಸಂಭವಿಸಿದ್ದು ಇಲ್ಲಿ ಉಲ್ಲೇಖನೀಯ. ಸದ್ಯ ಉಭಯ ದೇಶಗಳ ಸೇನೆಯ ಹಿರಿಯ ಅಧಿಕಾರಿಗಳು ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮಾತುಕತೆ ಮುಂದುವರೆಸಿದ್ದಾರೆ ಎನ್ನಲಾಗಿದೆ. ಆದರೆ, ಈ ಘರ್ಷಣೆಯಲ್ಲಿ ಚೀನಾ ಸೈನಿಕರಿಗೂ ಕೂಡ ಹಾನಿ ತಲುಪಿದೆ ಎಂದು ಸೇನಾ ಮೂಲಗಳು ಹೇಳಿವೆ. ಕಳೆದ ಕೆಲ ದಿನಗಳಿಂದ ಗಡಿಭಾಗದಲ್ಲಿ ಏರ್ಪಟ್ಟಿರುವ ಉದ್ವಿಗ್ನತೆಯನ್ನು ನಿವಾರಿಸಲು ಶಾಂತಿ ಮಾತುಕತೆಯ ಪ್ರಕ್ರಿಯೆಗಳು ನಡೆಯುತ್ತಿವೆ. ಏತನ್ಮಧ್ಯೆ ನಿನ್ನೆ ನಡೆದಿರುವ ಘರ್ಷಣೆಯ ಬಳಿಕ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ ಎಂದು ಸೇನಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ CDS ಬಿಪಿನ್ ರಾವತ್ ಜೊತೆ 1 ಗಂಟೆಗಳ ಕಾಲ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ವಿದೇಶಾಂಗ ಸಚಿವ ಹಾಗೂ ಸೇನಾ ಮುಖ್ಯಸ್ಥರು ಕೂಡ ಉಪಸ್ಥಿತರಿದ್ದರು ಎನ್ನಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.