ನವದೆಹಲಿ: ಕೇಂದ್ರ ಸರ್ಕಾರ ಇಂದು ದೇಶಾದ್ಯಂತ ಇ-ಸಿಗರೆಟ್ ಮತ್ತು ಇ-ಹುಕ್ಕಾವನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಇ-ಸಿಗರೇಟ್‌ ಉತ್ಪಾದನೆ, ಆಮದು ಹಾಗೂ ಮಾರಾಟ ನಿಷೇಧಿಸುವ ಸುಗ್ರೀವಾಜ್ಞೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.


COMMERCIAL BREAK
SCROLL TO CONTINUE READING

ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ದೇಶದಲ್ಲಿ ಇ-ಸಿಗರೇಟ್ ಮತ್ತು ಇ-ಹುಕ್ಕಾಗಳ ತಯಾರಿಕೆ, ಮಾರಾಟ, ರಫ್ತು-ಆಮದು ಜಾಹೀರಾತು ಮತ್ತು ವಿತರಣೆಯ ಮೇಲೆ ಸಂಪೂರ್ಣ ನಿಷೇಧ ಹೇರಲಾಗಿದೆ ಎಂದು ಹೇಳಿದರು. 


ಈಗ ಇ-ಸಿಗರೆಟ್ ಮತ್ತು ಇ-ಹುಕ್ಕಾ ಬಳಕೆಯ ಮೇಲೆ ದಂಡ ಮತ್ತು ಶಿಕ್ಷೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ ನಿರ್ಮಲಾ ಸೀತಾರಾಮನ್,ಇ-ಸಿಗರೆಟ್ ಮತ್ತು ಇ-ಹುಕ್ಕಾವನ್ನು ಬಳಸುವವರಿಗೆ ಮೊದಲ ಬಾರಿಗೆ 1 ಲಕ್ಷ ರೂ. ದಂಡ ವಿಧಿಸಲಾಗುತ್ತದೆ ಮತ್ತು 1 ವರ್ಷ ಶಿಕ್ಷೆ ವಿಧಿಸಲಾಗುವುದು. ಎರಡನೇ ಬಾರಿಗೆ ಸಿಕ್ಕಿಬಿದ್ದರೆ 5 ಲಕ್ಷ ರೂ. ದಂಡ ಮತ್ತು 3 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.


ಜನರು ಧೂಮಪಾನ ಚಟದಿಂದ ಹೊರಬರಲಿ ಎಂಬ ಉದ್ದೇಶದಿಂದ ದೇಶದಲ್ಲಿ ಇ-ಸಿಗರೇಟ್ ಮಾರಾಟಕ್ಕೆ ಪ್ರೋತ್ಸಾಹ ನೀಡಲಾಗಿತ್ತು. ಆದರೆ, ಇ-ಸಿಗರೇಟ್ ಸೇವನೆಯಿಂದಾಗಿ ಅಮೆರಿಕದಲ್ಲಿ ಈವರೆಗೂ ಏಳು ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿಗಳು ಬಂದಿವೆ ಎಂದು ತಿಳಿಸಿದ ವಿತ್ತ ಸಚಿವರು, ಯುವ ಜನತೆಯ ಆರೋಗ್ಯದ ಮೇಲೆ ಬೀರಬಹುದಾದ ಪರಿಣಾಮಗಳನ್ನೂ ಗಮನದಲ್ಲಿಟ್ಟುಕೊಂಡು ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದೆ ಎಂದರು.