ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಎರಡು ದಿನಗಳ ಭೇಟಿಗಾಗಿ ಕೇರಳಕ್ಕೆ ಆಗಮಿಸಲಿದ್ದಾರೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಕೇರಳದಲ್ಲಿ ನಿರಂತರ ಸುರಿದ ಮಳೆಯಿಂದಾಗಿ ಇವರೆಗೆ 60 ಜನರು ಪ್ರವಾಹಕ್ಕೆ ಬಲಿಯಾಗಿದ್ದಾರೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಅವರು ತಮ್ಮ ಲೋಕಸಭಾ ಕ್ಷೇತ್ರ ವಯನಾಡಿಗೆ ಭೇಟಿ ನೀಡಿ ಪರಿಹಾರ ಕ್ರಮಗಳನ್ನು ಪರಿಶೀಲಿಸಲಿದ್ದಾರೆ ಎಂದು ತಿಳಿದುಬಂದಿದೆ. 



"ಮುಂದಿನ ಕೆಲವು ದಿನಗಳವರೆಗೆ ನಾನು ಪ್ರವಾಹದಿಂದ ಹಾನಿಗೊಳಗಾದ ವಯನಾಡದ ನನ್ನ ಲೋಕಸಭಾ ಕ್ಷೇತ್ರದಲ್ಲಿ ನೆಲೆಸುತ್ತೇನೆ. ವಯನಾಡದಾದ್ಯಂತ ಪರಿಹಾರ ಶಿಬಿರಗಳಿಗೆ ನಾನು  ಭೇಟಿ ನೀಡಲಿದ್ದೇನೆ ಮತ್ತು ಜಿಲ್ಲಾ ಮತ್ತು ರಾಜ್ಯದ ಅಧಿಕಾರಿಗಳೊಂದಿಗೆ ಪರಿಹಾರ ಕ್ರಮಗಳ ಕುರಿತಾಗಿ ಪರಿಶೀಲಿಸುತ್ತೇನೆ" ಎಂದು ರಾಹುಲ್ ಗಾಂಧಿ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.


ಕಾಂಗ್ರೆಸ್ ಪಕ್ಷದ ಮೂಲಗಳ ಪ್ರಕಾರ ರಾಹುಲ್ ಗಾಂಧಿಯವರು ಎಡಂಬಣ್ಣಪ್ಪರ, ನೀಲಂಬುರದ ಕೊಟ್ಟಕಲ್ ನಲ್ಲಿರುವ ಪರಿಹಾರ ಶಿಬಿರಗಳಿಗೆ ಭೇಟಿ ನೀಡಿ ಮಲಪ್ಪುರಂ ಕಲೆಕ್ಟರೇಟ್ ನಲ್ಲಿ ನಡೆಯುವ ಪರಿಶೀಲನಾ ಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎನ್ನಲಾಗಿದೆ.ಸೋಮವಾರದಂದು ವಯನಾಡಿನ ಪೀಡಿತ ಪ್ರದೇಶಗಳಿಗೆ ಅವರು ಭೇಟಿ ನೀಡಲಿದ್ದಾರೆ.



ಇಂದು ಬೆಳಗ್ಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪ್ರವಾಹ ಪರಿಸ್ಥಿತಿಯನ್ನು ಪರಿಶೀಲಿಸಿದರು. ಅಧಿಕೃತ ಹೇಳಿಕೆಯಲ್ಲಿ ಸಾವಿನ ಸಂಖ್ಯೆ 60 ಕ್ಕೆ ತಲುಪಿದೆ ಎಂದು ಅವರು ಖಚಿತಪಡಿಸಿದ್ದಾರೆ. ಇದುವರೆಗೆ ರಾಜ್ಯದಾದ್ಯಂತ 1,318 ಪರಿಹಾರ ಶಿಬಿರಗಳಲ್ಲಿ 1.65 ಲಕ್ಷಕ್ಕೂ ಹೆಚ್ಚು ಜನರು ಆಶ್ರಯ ಪಡೆದಿದ್ದಾರೆ. ಮಳೆಯಿಂದಾಗಿ ಹಲವಾರು ಭೂಕುಸಿತಗಳು ಸಂಭವಿಸಿವೆ. ರಾಜ್ಯದ 14 ಜಿಲ್ಲೆಗಳಲ್ಲಿ ಈಗ ಭೀಕರ ಪ್ರವಾಹಕ್ಕೆ ಕಾರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.