ನವದೆಹಲಿ: ಕೇರಳ ಹಾಗೂ ಕರ್ನಾಟಕದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯ ನಿರ್ವಹಣೆಗೆ ಪರಿಹಾರವಾಗಿ ಕಾಂಗ್ರೆಸ್ ಪಕ್ಷದ ಎಲ್ಲಾ ಶಾಸಕರು, ಸಂಸದರು ತಮ್ಮ ಒಂದು ತಿಂಗಳ ವೇತನ ನೀಡಲು ನಿರ್ಧರಿಸಿದ್ದಾರೆ. 


COMMERCIAL BREAK
SCROLL TO CONTINUE READING

ಈ ಬಗ್ಗೆ ಶನಿವಾರ ಸುದ್ದಿಗೋಷ್ಠಿ ನಡೆಸಿ ತಿಳಿಸಿದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಎಲ್ಲಾ ರಾಜ್ಯಗಳ ಕಾಂಗ್ರೆಸ್ ಸಮಿತಿ ಅಧ್ಯಕ್ಷರೊಂದಿಗೆ ಸಭೆ ನಡೆಸಿ ಮಳೆಯಿಂದಾಗಿರುವ ಹಾನಿ ಬಗ್ಗೆ ಚರ್ಚಿಸಿದ್ದಾರೆ. ಈ ಸಂದರ್ಭದಲ್ಲಿ ಕೇರಳ, ಕರ್ನಾಟಕದಲ್ಲಾಗಿರುವ ಪ್ರವಾಹ ಪರಿಸ್ಥಿತಿ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಪ್ರವಾಹ ಪರಿಹಾರ ಕಾರ್ಯಕ್ಕೆ ಎಲ್ಲಾ ರಾಜ್ಯಗಳ ಕಾಂಗ್ರೆಸ್ ಪಕ್ಷದ ಎಲ್ಲಾ ಶಾಸಕರು, ಸಂಸದರು ಮತ್ತು ವಿಧಾನ ಪರಿಷತ್ ಸದಸ್ಯರು ಒಂದು ತಿಂಗಳ ವೇತನ ನೀಡುವಂತೆ ರಾಹುಲ್ ಗಾಂಧಿ ನಿರ್ದೇಶನ ನೀಡಿದ್ದಾರೆ ಎಂದು ಅವರು ತಿಳಿಸಿದರು.



ಮುಂದುವರೆದು ಮಾತನಾಡಿದ ಅವರು, ಈಗಾಗಲೇ ಪರವಾಹ ಪರಿಹಾರಕ್ಕೆ ಕರ್ನಾಟಕ, ಪಂಜಾಬ್, ಪಾಂಡಿಚೇರಿ ಸರ್ಕಾರಗಳು ನೆರವಿನ ಹಸ್ತ ನೀಡಿದೆ. ಕೆ.ಸಿ.ರಾಮಮೂರ್ತಿ ನೇತೃತ್ವದಲ್ಲಿ ರಿಲೀಫ್ ಸಮಿತಿ ರಚನೆ ಮಾಡಲಾಗಿದ್ದು, ಈ ಸಮಿತಿ ಕೇರಳ ಮತ್ತು ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸಲಿದೆ. ಈ ಸಮಿತಿ ಸಭೆ ಸೋಮವಾರ ನಡೆಯಲಿದೆ ಎಂದು ಗುಂಡೂರಾವ್ ತಿಳಿಸಿದರು. 



ಕೇರಳ ಮತ್ತು ಕರ್ನಾಟಕದ ನೆರೆ ಹಾವಳಿಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ, ರಾಜ್ಯಗಳಿಗೆ ಅಗತ್ಯವಾದ ನೆರವು ನೀಡಬೇಕು ಎಂದು ಹೇಳಿದರಲ್ಲದೆ, ಕೇರಳ ಪ್ರವಾಹವನ್ನು ರಾಷ್ಟ್ರೀಯ ದುರಂತ ಎಂದು ಪರಿಗಣಿಸಬೇಕು ಎಂದು ಗುಂಡೂರಾವ್ ಒತ್ತಾಯಿಸಿದರು.