ಮೇಘಾಲಯ ಮುಖ್ಯಮಂತ್ರಿಯಾಗಿ ಮಾ.6ರಂದು ಕಾನ್ರಾಡ್ ಸಂಗ್ಮಾ ಪ್ರಮಾಣ ವಚನ
ಮೇಘಾಲಯದ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್ಪಿಪಿ) ಮುಖ್ಯಸ್ಥ ಕಾನ್ರಾಡ್ ಸಂಗ್ಮಾ ಮಾ.6ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ನವದೆಹಲಿ: ಮೇಘಾಲಯದ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್ಪಿಪಿ) ಮುಖ್ಯಸ್ಥ ಕಾನ್ರಾಡ್ ಸಂಗ್ಮಾ ಮಾ.6ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಆದರೆ ಸದ್ಯಕ್ಕೆ ಉಪಮುಖ್ಯಮಂತ್ರಿಯಾಗಿ ಯಾರೂ ಇರುವುದಿಲ್ಲ ಎಂದು ಬಿಜೆಪಿ ನಾಯಕ ಹಿಮಾಂತ್ ಬಿಸ್ವಾ ಶರ್ಮಾ ತಿಳಿಸಿದ್ದಾರೆ.
ಸರ್ಕಾರ ರಚನೆಗೆ ಸಂಬಂಧಪಟ್ಟಂತೆ ಕಾನ್ರಾಡ್ ಸಂಗ್ಮಾ ಅವರು ರಾಜ್ಯಪಾಲ ಗಂಗಾಪ್ರಸಾದ್ ಅವರನ್ನು ಭೇಟಿಯಾಗಿ ಹಕ್ಕು ಮಂಡಿಸಿದ ಸಂದರ್ಭದಲ್ಲಿ ಮಾತನಾಡಿ, ಬಿಜೆಪಿ ಹಿರಿಯ ಒಕ್ಕೂಟ 34 ಶಾಸಕರನ್ನು ಹೊಂದಲಿದೆ ಎಂದು ಹೇಳಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಗ್ಮಾ, ಅಸೆಂಬ್ಲಿ ಅವಧಿಯು ಮಾರ್ಚ್ 7 ರಂದು ಕೊನೆಗೊಳ್ಳುವುದರಿಂದ ಮುಂದಿನ ಎರಡು ಮೂರು ದಿನಗಳು ತುಂಬಾ ನಿರ್ಣಾಯಕವಾಗಿವೆ. ಮೈತ್ರಿಕೂಟ ಸರ್ಕಾರ ರಚನೆ ಅಷ್ಟು ಸುಲಭವಲ್ಲ, ಆದರೆ ನಮ್ಮೊಂದಿಗೆ ಇರುವ ಶಾಸಕರು ರಾಜ್ಯ ಮತ್ತು ಜನರಿಗೆ ತುಂಬಾ ಬದ್ಧರಾಗಿದ್ದಾರೆ ಮತ್ತು ಅವರು ಅಭಿವೃದ್ಧಿ ಪರ ಕೆಲಸ ಮಾಡಲಿದ್ದಾರೆ ಎಂದು ಹೇಳಿದರು.
ಇದಲ್ಲದೆ, ಎಲ್ಲಾ ಬೆಂಬಲಿತ ರಾಜಕೀಯ ಪಕ್ಷಗಳ ಇಬ್ಬರು ಶಾಸಕರಲ್ಲಿ ಒಬ್ಬ ಶಾಸಕ ಹೊಸ ಸರ್ಕಾರದ ಒಂದು ಭಾಗವಾಗಲಿದ್ದಾರೆ. ಅಂತೆಯೇ ಬಿಜೆಪಿ ಇಬ್ಬರು ಶಾಸಕರ ಪೈಕಿ ಒಬ್ಬರು ಮಂತ್ರಿಮಂಡಲದಲ್ಲಿ ಸ್ಥಾನ ಪಡೆಯಲಿದ್ದಾರೆ ಎಂದು ಭಾರತೀಯ ಜನತಾ ಪಕ್ಷ (ಬಿಜೆಪಿ)ದ ನಾಯಕ ತಿಳಿಸಿದ್ದಾರೆ.
ಮಾರ್ಚ್ 3 ರಂದು ಪ್ರಕಟವಾದ ಮೇಘಾಲಯ ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶಗಳ ಪ್ರಕಾರ, ಕಾಂಗ್ರೆಸ್ 21 ಮತ್ತು ಎನ್ಪಿಪಿ 19 ಸ್ಥಾನಗಳನ್ನು ಪಡೆದುಕೊಂಡಿದೆ.