ನವದೆಹಲಿ: ಇನ್ನೇನು ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಎಲ್ಲಾ ಕಡೆ ಚುನಾವಣೆ ಬಗ್ಗೆಯೇ ಚರ್ಚೆ. ಈಗ ನಾನು ತಿಳಿಸುತ್ತಿರುವ ವಿಷಯವೂ ಚುನಾವಣೆಗೆ ಸಂಬಂಧಿಸಿದ್ದೇ. ಆದರೆ ಇದು ಮಾತ್ರ ಸಖತ್ ಇಂಟರೆಸ್ಟಿಂಗ್...


COMMERCIAL BREAK
SCROLL TO CONTINUE READING

ಭಾರತದ ಹಲವು ಚುನಾವಣೆಗಳಲ್ಲಿ ಸ್ಪರ್ಧಿಸಿರುವ ಈತ 'ಆಲ್ ಇಂಡಿಯಾ ಎಲೆಕ್ಷನ್ ಕಿಂಗ್' ಎಂದೇ ಪ್ರಸಿದ್ಧಿ! ಇದಕ್ಕೆ ಕಾರಣವೂ ಅಷ್ಟೇ ವಿಶೇಷವಾಗಿದೆ. ಇವರು ಇದುವರೆಗೂ ದೇಶದ 170 ವಿವಿಧ ಚುನಾವಣೆಗಳಲ್ಲಿ ಸ್ಪರ್ಧಿಸಿ ಒಂದು ಬಾರಿಯೂ ಗೆಲುವು ಸಾಧಿಸಿಲ್ಲ. ಆದರೆ, ಅವರ ಸೋಲೂ ಸಹ ದಾಖಲೆ ಬರೆದಿದೆ. 'ಭಾರತದ ಅತ್ಯಂತ ವಿಫಲ ಅಭ್ಯರ್ಥಿ' ಎಂಬ ಶೀರ್ಷಿಕೆಯಡಿ ಆತನ ಹೆಸರು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಸೇರಿದೆ!


ಸಾಮಾನ್ಯವಾಗಿ ಒಂದೆರಡು ಬಾರಿ ಚುನಾವಣೆಯಲ್ಲಿ ಸೋಲುತ್ತಿದ್ದಂತೆ ಮತ್ತೆ ಸ್ಪರ್ಧಿಸುವ ಉತ್ಸಾಹ ಕಳೆದುಕೊಳ್ಳುವವರ ನಡುವೆ 170 ಬಾರಿ ಸೋಲನುಭವಿಸಿದರೂ ಇವರು ಮಾತ್ರ ಮತ್ತೆ ಸ್ಪರ್ಧಿಸುವ ಒಲವು ಹೊಂದಿದ್ದಾರೆ. ಅವರೇ, ಡಾ.ಕೆ.ಪದ್ಮರಾಜನ್. ತಮಿಳುನಾಡಿನ ಸೇಲಂ ನಿವಾಸಿ ಪದ್ಮರಾಜನ್ನ್(60) ಅವರು 1988ರಲ್ಲಿ ಮೊದಲ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನುಭವಿಸಿದರು. ಆದರೆ ಸೋಲಿಗೆ ಹೆದರದೆ ಮರಳಿ ಯತ್ನವ ಮಾಡು ಎಂಬಂತೆ ಇದುವರೆಗೂ 170 ಚುನಾವಣೆಗಳಲ್ಲಿ ಸ್ಪರ್ಧಿಸಿದ್ದಾರೆ. ಆದರೆ ಇದುವರೆಗೂ ಒಂದು ಬಾರಿಯೂ ಗೆಲುವು ಸಾಧಿಸಿಲ್ಲ.


ವೃತ್ತಿಯಲ್ಲಿ ಹೋಮಿಯೋಪತಿ ವೈದ್ಯರಾದ ಪದ್ಮನಾಭನ್, ಬಳಿಕ ಬಿಸಿನೆಸ್ ಮಾಡಲು ಆರಂಭಿಸಿದರು.  'ಆಲ್ ಇಂಡಿಯಾ ಎಲೆಕ್ಷನ್ ಕಿಂಗ್' ಎಂದೇ ಸ್ವಯಂ ಘೋಷಿಸಿಕೊಂಡಿರುವ ಇವರು ಲೋಕಸಭೆ, ಸ್ಥಳೀಯ ಚುನಾವಣೆಗಳಷ್ಟೇ ಅಲ್ಲ, ರಾಷ್ಟ್ರಪತಿ ಚುನಾವಣೆಗೂ ಸ್ಪರ್ಧಿಸಿದ್ದಾರೆ. ಆದರೆ ಅಲ್ಲಿಯೂ ಸೋಲನುಭವಿಸಿದ್ದಾರೆ. ಅಷ್ಟೇ ಅಲ್ಲ, ದೇಶದ ಮಹಾನ್ ನಾಯಕರಾದ ಅಟಲ್ ಬಿಹಾರಿ ವಾಜಪೇಯಿ, ಮನಮೋಹನ್ ಸಿಂಗ್, ಪ್ರಣಬ್ ಮುಖರ್ಜಿ, ಎಪಿಜೆ ಅಬ್ದುಲ್ ಕಲಾಂ, ಜಯಲಲಿತಾ, ಕರುಣಾನಿಧಿ ವಿರುದ್ಧವೂ ಸ್ಪರ್ಧಿಸಿದ್ದಾರೆ.