ನವದೆಹಲಿ: ಕೊರೊನಾ ವೈರಸ್ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಇದೀಗ ಮತ್ತೊಂದು ವಿಚಿತ್ರ ಸಲಹೆ ನೀಡಲಾಗುತ್ತಿದ್ದು ಇದು ಭಾರಿ ವೈರಲ್ ಕೂಡ ಆಗುತ್ತಿದೆ. ಈ ಸಲಹೆ ಏನು ಅಂದ್ರೆ, ಸಾರಾಯಿ ಕುಡಿಯುವ ವ್ಯತಿಗಳ ಮೇಲೆ ಕೊರೊನಾ ವೈರಸ್ ಪ್ರಭಾವ ಬೀರುವುದಿಲ್ಲ ಎನ್ನಲಾಗುತ್ತಿದೆ. ಹೀಗಾಗಿ ನಾವು ಇದರ ಹಿಂದಿನ ಸತ್ಯಾ-ಸತ್ಯತೆಯನ್ನು ತಿಳಿದುಕೊಳ್ಳುವ ಒಂದು ಪ್ರಯತ್ನ ನಡೆಸಿದ್ದೇವೆ.


COMMERCIAL BREAK
SCROLL TO CONTINUE READING

ಈ ಕುರಿತಾದ ವೃತ್ತಪತ್ರಿಕೆಯ ಒಂದು ಕಟ್ಟಿಂಗ್ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಸುದ್ದಿ ಮಾಡುತ್ತಿದ್ದು, ಅದರ ಹೆಡ್ಲೈನ್ ನಲ್ಲಿ 'ಇನ್ಯಾಕೆ ಅಳಬೇಕು.. ಒಂದೇ ಪೆಗ್ ನಲ್ಲಿ ಪ್ಯಾಕ್ ಆಗಲಿದೆ ಕೊರೊನಾ...' ಎಂದು ಬರೆಯಲಾಗಿದೆ.


ಪತ್ರಿಕೆಯಲ್ಲಿ ಪ್ರಕಟಗೊಂಡ ಈ ವರದಿಯಲ್ಲಿ ಯಾರು ಸಾರಾಯಿ ಸೇವನೆ ಮಾಡುತ್ತಾರೋ ಅವರಿಗೆ ಕೊರೊನಾದಿಂದ ಯಾವುದೇ ಆತಂಕ ಇಲ್ಲ ಹಾಗೂ ಇದನ್ನು ಸಾಬೀತುಪಡಿಸಲು ಸಂಶೋಧನೆಯೊಂದರ ಉಲ್ಲೇಖ ನೀಡಲಾಗುತ್ತಿದೆ.


ವರದಿಯ ಪ್ರಕಾರ ಜರ್ಮನಿಯಲ್ಲಿ ನಡೆಸಲಾದ ಒಂದು ಸಂಶೋಧನೆಯನ್ನು ಉಲ್ಲೇಖಿಸಿಲಾಗಿದ್ದು, ಅಲ್ಕೋಹಾಲ್ ಸಂಪರ್ಕಕ್ಕೆ ಬರುತ್ತಿದ್ದಂತೆ ಕೊರೊನಾ ವೈರಸ್ ಒಂದೇ ಒಂದು ನಿಮಿಷದಲ್ಲಿ ಮರಣ ಹೊಂದುತ್ತದೆ ಎನ್ನಲಾಗಿದ್ದು, ಬ್ಲೀಚ್ ಸಹಾಯದಿಂದ ಕೇವಲ 30 ಸೆಕೆಂಡ್ ಗಳಲ್ಲಿ ಈ ವೈರಸ್ ಅನ್ನು ಮಟ್ಟಹಾಕಬಹುದು ಎಂದು ಹೇಳಲಾಗಿದೆ.


ಯಾವುದೇ ತನಿಖೆಯನ್ನು ನಡೆಸದೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಈ ಸಲಹೆಯ ಸತ್ಯಾಸತ್ಯತೆ ತಿಳಿಯುವುದು ಅವಶ್ಯಕವಾಗಿದೆ. ಇದರ ಹಿಂದಿನ ಸತ್ಯ ಅರಿಯಲು ನಾವು ದೆಹಲಿಯ ಓರ್ವ ವೈದ್ಯರನ್ನು ಸಂಪರ್ಕಿಸಿ ಇದು ಸಾಧ್ಯವೇ ಎಂಬುದಾಗಿ ನೇರವಾಗಿ ಪ್ರಶ್ನಿಸಿದ್ದೇವೆ.


ಸಾರಾಯಿ ಕುಡಿಯುವವರ ರೋಗನಿರೋಧಕ ಶಕ್ತಿ ಕಡಿಮೆಯಾಗಿರುತ್ತದೆ
ನಾವು ಕೇಳಿದ ಪ್ರಶ್ನೆಗೆ ಮೊದಲು ನಕ್ಕ ವೈದ್ಯರು, ಬಳಿಕ ಸಾರಾಯಿ ಕುಡಿಯುವವರು ಹೆಚ್ಚಿನ ಮುಂಜಾಗ್ರತೆ ವಹಿಸುವುದು ಅವಶ್ಯಕವಾಗಿದೆ ಎಂದಿದ್ದಾರೆ. ವೈದ್ಯರು ಹೇಳುವ ಪ್ರಕಾರ, ಸಾರಾಯಿ ಕುಡಿಯುವ ಜನರಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗಿರುತ್ತದೆ ಹಾಗೂ ಅವರು ವೈರಸ್ ಜೊತೆಗೆ ಹೋರಾಡುವಲ್ಲಿ ದುರ್ಬಲರಾಗಿರುತ್ತಾರೆ ಎಂದಿದ್ದಾರೆ. ಹೀಗಾಗಿ ನಾವು ನಡೆಸಿದ ಈ ತನಿಖೆಯಲ್ಲಿ ಸಾರಾಯಿ ಸೇವಿಸಿ ಕೊರೊನಾ ವೈರಸ್ ನಿಂದ ಪಾರಾಗಿ ಎಂಬ ಸಲಹೆ ಸುಳ್ಳು ಎಂದು ಸಾಬೀತಾಗಿದೆ.


ಸದ್ಯ ಭಾರತದಲ್ಲಿನ ಸ್ಥಿತಿ ಏನು?
ಭಾರತದಲ್ಲಿ ಕರೋನಾ ವೈರಸ್ ಕ್ರಮೇಣ ತನ್ನ ವ್ಯಾಪ್ತಿ ವಿಸ್ತರಿಸ ತೊಡಗಿದೆ. ಇದುವರೆಗೆ ದೇಶದಲ್ಲಿ ಒಟ್ಟು 29 ಪ್ರಕರಣಗಳು ಪಾಸಿಟಿವ್ ಪತ್ತೆಯಾಗಿವೆ. ಇವುಗಳಲ್ಲಿ ಒಟ್ಟು ಮೂರು ಪ್ರಕರಣಗಳು ಕೇರಳದಿಂದ ವರದಿಯಾಗಿವೆ. ದೆಹಲಿ, ಹೈದರಾಬಾದ್, ಆಗ್ರಾ, ಜೈಪುರ್, ಪಟ್ನಾ ಹಾಗೂ ಹರಿಯಾಣ ರಾಜ್ಯಗಳಲ್ಲಿಯೂ ಕೂಡ ಕೆಲ ಪ್ರಕರಣಗಳು ಬೆಳಕಿಗೆ ಬಂದಿವೆ.


ಭಾರತ ಈ ವೈರಸ್ ನ್ನು ಎದುರಿಸಲು ಸಿದ್ಧವಾಗಿದೆಯೇ?
ಈ ವೈರಸ್ ಅನ್ನು ಎದುರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾಧ್ಯವಾದಷ್ಟು ಕ್ರಮಗಳನ್ನು ಕೈಗೊಳ್ಳುತ್ತಿವೆ. ಶಂಕಿತ ಕೊರೊನಾ ವೈರಸ್ ಅನ್ನು ಖಚಿತಪಡಿಸಲು ಭಾರತದಲ್ಲಿ ಒಟ್ಟು 15 ಲ್ಯಾಬ್ ಗಳಿದ್ದು, ಅವಶ್ಯಕ ಎನಿಸಿದರೆ ಇನ್ನೂ 50 ಲ್ಯಾಬ್ ಗಳನ್ನು ತೆರೆಯಬಹುದು. ದೆಹಲಿಯಲ್ಲಿ ನಡೆದ ಮಂತ್ರಿಗಳ ಸಭೆಯಲ್ಲಿ  ಈ ಕುರಿತು ಹೇಳಿಕೆ ನೀಡಿರುವ ಫಾರ್ಮಾ ವಿಭಾಗ, ಈ ರೋಗವನ್ನು ಹತ್ತಿಕ್ಕಲು ಸಾಕಷ್ಟು ಔಷಧಿಗಳು ಲಭ್ಯವಿರಲಿವೆ ಎಂದು ಹೇಳಿದೆ. ಗ್ರೌಂಡ್ ಲೆವಲ್ ನಲ್ಲಿ ಕಾರ್ಯನಿರ್ವಹಿಸುವ ಆರೋಗ್ಯ ಅಧಿಕಾರಿಗಳು ಶಂಕಿತರ ಕುಟುಂಬ ಸದಸ್ಯರ ಜೊತೆ ಸಂಪರ್ಕದಲ್ಲಿದ್ದು, ಸೋಂಕಿತ ರೋಗಿಗಳನ್ನು ಮನೆಯಲ್ಲಿಯೇ ಒಂದು ಬೇರೆ ವ್ಯವಸ್ಥೆ ಮಾಡಿ ಅವರನ್ನು ಇಡಲು ಸಲಹೆಗಳನ್ನು ನೀಡುತ್ತಿದ್ದಾರೆ.