Coronavirus ಭೀತಿ: lockdown ವೇಳೆ ಮನೆಯಿಂದ ಹೊರಹೋದ ಸಹೋದರನ ಹತ್ಯೆಗೈದ ಅಣ್ಣ
ದೇಶಾದ್ಯಂತ ಕೊರೊನಾ ವೈರಸ್ ನ ಭೀತಿ ಯಾವ ರೀತಿ ಪಸರಿಸಿದೆ ಎಂದರೆ, ಜನರು ತಮ್ಮ ರಕ್ತ ಸಂಬಂಧಿಗಳನ್ನೇ ಹತ್ಯೆಗೈದಿದ್ದಾರೆ
ಮುಂಬೈ: ಕೊರೊನಾ ವೈರಸ್ ಕಾರಣ ದೇಶಾದ್ಯಂತ ಜಾರಿ ಇರುವ ಲಾಕ್ ಡೌನ್ ವೇಳೆ ಮನೆಯಿಂದ ಹೊರಹೋಗಿದ್ದಕ್ಕಾಗಿ ಮುಂಬೈನ ಪಶ್ಚಿಮ ಉಪನಗರದ ಕಾಂದಿವಿಲಿಯಲ್ಲಿ ಸಹೋದರನ ಹತ್ಯೆ ನಡೆಸಿದ ಆರೋಪದ ಮೇಲೆ 28 ವರ್ಷದ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಸಮತಾ ನಗರ ಠಾಣೆಯ ಪೊಲೀಸ ಅಧಿಕಾರಿಯೊಬ್ಬರು, ರಾಜೇಶ್ ಲಕ್ಷ್ಮಿ ಠಾಕೂರ್ ಹೆಸರಿನ ವ್ಯಕ್ತಿಯೋರ್ವ ಬುಧವಾರ ರಾತ್ರಿ ಲಾಕ್ ಡೌನ್ ಕುರಿತು ಪದೇ-ಪದೇ ಎಚ್ಚರಿಕೆ ನೀಡಿದ ಬಳಿಕವೂ ಕೂಡ ಮನೆಯಿಂದ ಹೊರಹೋದ ಕಾರಣ ತನ್ನ ಕಿರಿಯ ಸಹೋದರೆ ದುರ್ಗೇಶ್ ನನ್ನು ಹತ್ಯೆಗೈದಿದ್ದಾನೆ ಎಂದು ಹೇಳಿದ್ದಾರೆ. ಮೃತ ವ್ಯಕ್ತಿ ಪುಣೆಯ ಖಾಸಗಿ ಕಂಪನಿಯೊಂದರಲ್ಲಿ ನೌಕರಿ ಮಾಡುತ್ತಿದ್ದು, ಕೊರೊನಾ ವೈರಸ್ ನ ಹೆಚ್ಚಾಗುತ್ತಿರುವ ಪ್ರಕೋಪದ ಹಿನ್ನೆಲೆ ಮನೆಗೆ ಮರಳಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಪೋಲೀಸ್ ಅಧಿಕಾರಿಗಳು ನೀಡಿರುವ ಹೇಳಿಕೆ ಪ್ರಕಾರ ದುರ್ಗೇಶ್ ಹೊರಗೆ ವಾಯುವಿಹಾರ ನಡೆಸಿ ಮನೆಗೆ ಮರಳಿದ ಬಳಿಕ ಆರೋಪಿ ಹಾಗೂ ಆತನ ಪತ್ನಿ ದುರ್ಗೇಶ್ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವೇಳೆ ತೀವ್ರ ವಾಗ್ವಾದ ಉಂಟಾಗಿದ್ದು, ಬಳಿಕ ಆರೋಪಿ ತನ್ನ ಸಹೋದರನ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದಾನೆ ಎಂದಿದ್ದಾರೆ.
ಬಳಿಕ ಹಲ್ಲೆಯಲ್ಲಿ ತೀವ್ರವಾಗಿ ಗಾಯಗೊಂಡ ದುರ್ಗೇಶ್ ನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಸ್ಪತ್ರೆಯ ವೈದ್ಯರು ದುರ್ಗೇಶ್ ಮೃತಪಟ್ಟಿದ್ದಾನೆ ಎಂದು ಘೋಷಿಸಿದ್ದಾರೆ. ಸದ್ಯ ಆರೋಪಿಯ ವಿರುದ್ಧ ಹತ್ಯೆಯ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ಆತನನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.