ನವದೆಹಲಿ: ಐತಿಹಾಸಿಕ ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸರ್ವೋಚ್ಚ ನ್ಯಾಯಾಲಯ ಇಂದು ತೆರೆ ಎಳೆದಿದೆ. ಕಾವೇರಿ ತೀರ್ಪು ಕರ್ನಾಟಕಕ್ಕೇ ವರದಾನವಾಗಿದೆ. ಕರ್ನಾಟಕದ ಭಾಗಶಃ ಬೇಡಿಕೆಗಳಿಗೆ ಸರ್ವೋಚ್ಚ ನ್ಯಾಯಾಲಯ ಅಸ್ತು ಎಂದಿದ್ದು ರಾಜ್ಯಕ್ಕೆ ಹೆಚ್ಚುವರಿ 14.75 ಟಿಎಂಸಿ ಕಾವೇರಿ ನೀರನ್ನು ಅನುಮತಿಸಿದೆ. ಬೆಂಗಳೂರಿನಲ್ಲಿ ಕುಡಿಯುವ ನೀರಿನ ಕೊರತೆಯನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ನ್ಯಾಯಾಲಯ ಹೇಳಿದೆ. 


COMMERCIAL BREAK
SCROLL TO CONTINUE READING

ತಮಿಳುನಾಡಿನ 20 ಟಿಎಂಸಿ ಅಂತರ್ಜಲವನ್ನು ಪರಿಗಣಿಸಿದ ಸುಪ್ರೀಂಕೋರ್ಟ್ ಕರ್ನಾಟಕದಿಂದ ತಮಿಳುನಾಡಿಗೆ 192 ಟಿಎಂಸಿ ಬದಲಿಗೆ 177.25 ಟಿಎಂಸಿ ನೀರು ಹರಿಸಲು ಸೂಚಿಸಿದೆ. ಇದರಿಂದಾಗಿ ತಮಿಳುನಾಡಿಗೆ 14.05 ಟಿಎಂಸಿ ನೀರು ಕಡಿತಗೊಂಡಿದೆ. ಈ ಹಿಂದೆ ಕಾವೇರಿ ನ್ಯಾಯಾಧೀಕರಣ ಕೇರಳ ರಾಜ್ಯಕ್ಕೆ 30 ಟಿಎಂಸಿ ಮತ್ತು ಪುದುಚೇರಿಗೆ 7 ಟಿಎಂಸಿ ನೀರು ಹಂಚಿಕೆ ಮಾಡಿದ್ದನ್ನು ಕೋರ್ಟ್ ಎತ್ತಿಹಿಡಿದಿದೆ. 


ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ಅಮಿತಾವ್ ರಾಯ್, ಎ.ಎಂ. ಖನ್ವಿಲ್ಕರ್ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠ ಈ ಐತಿಹಾಸಿಕ ತೀರ್ಪನ್ನು ಪ್ರಕಟಿಸಿತು.


ನದಿಗಳು ರಾಷ್ಟ್ರೀಯ ಸಂಪತ್ತು ಎಂದು ಉಲ್ಲೇಖಿಸಿರುವ ನ್ಯಾಯಾಲಯ ಯಾವುದೇ ಒಂದು ರಾಜ್ಯಕ್ಕೂ ನದಿಗಳ ಬಗ್ಗೆ ಸಂಪೂರ್ಣ ಹಕ್ಕು ಇರುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ಈ ಸಂದರ್ಭದಲ್ಲಿ ಬ್ರಿಟಿಷರ ಕಾಲದ ಒಪ್ಪಂದಗಳನ್ನು ಉಲ್ಲೇಖಿಸಿದ ನ್ಯಾಯಮೂರ್ತಿ 1892 ಮತ್ತು 1924ರ ಒಪ್ಪಂದಗಳನ್ನು ಸಿಂಧುವಾಗಿದ್ದು 1924ರ ಒಪ್ಪಂದ ಕಾನೂನು ಬದ್ಧವಾಗಿದೆ. ಈ ಒಪ್ಪಂದಗಳು 50 ವರ್ಷಗಳ ಬಳಿಕ ರದ್ಧಾಗಲಿವೆ ಎಂದು ನ್ಯಾಯಾಧೀಕರಣ ಅನುಸರಿಸಿರುವ ಕ್ರಮ ಸರಿಯಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯ ತಿಳಿಸಿದೆ. ಜೊತೆಗೆ ಕಾವೇರಿ ನಿರ್ವಹಣಾ ಮಂಡಳಿ ರಚನೆ ಕೇಂದ್ರ ಸರ್ಕಾರಕ್ಕೆ ಬಿಟ್ಟ ವಿಚಾರ ಎಂದು ಸುಪ್ರೀಂಕೋರ್ಟ್ ತಿಳಿಸಿದ್ದು ಕರುನಾಡ ಜನತೆಗೆ ಬಿಗ್ ರಿಲೀಫ್ ದೊರೆತಿದೆ.


ಹಿಂದೆ ನ್ಯಾಯಾಧೀಕರಣ ಹಂಚಿಕೆ ಮಾಡಿದ್ದ ನೀರಿನ ವಿವರ ಈಗ ಸುಪ್ರೀಂಕೋರ್ಟ್ ಹಂಚಿಕೆ ಮಾಡಿರುವ ನೀರಿನ ವಿವರ
ಕರ್ನಾಟಕ 270 ಟಿಎಂಸಿ  ಕರ್ನಾಟಕ 284.75 ಟಿಎಂಸಿ 
ತಮಿಳುನಾಡು 419 ಟಿಎಂಸಿ ತಮಿಳುನಾಡು 404.25 ಟಿಎಂಸಿ
ಕೇರಳ 30 ಟಿಎಂಸಿಸಿ ಕೇರಳ 30 ಟಿಎಂಸಿಸಿ
ಪುದುಚೆರಿ 7 ಟಿಎಂಸಿ ಪುದುಚೆರಿ 7 ಟಿಎಂಸಿ