ನವದೆಹಲಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೋದರ ಸಂಬಂಧಿ ರಾಬರ್ಟ್ ವಾದ್ರಾ ಅವರಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಆರು ವಾರಗಳ ಕಾಲ ವಿದೇಶ ಪ್ರವಾಸ ಕೈಗೊಳ್ಳಲು ಸೋಮವಾರ ರೌಸ್ ಅವೆನ್ಯೂ ಕೋರ್ಟ್ ಅನುಮತಿ ನೀಡಿದೆ.


COMMERCIAL BREAK
SCROLL TO CONTINUE READING

ಅಮೇರಿಕಾ ಮತ್ತು ನೆದರ್ ಲ್ಯಾಂಡ್ ಗೆ ಪ್ರಯಾಣಿಸಲು ವಾದ್ರಾಗೆ ನ್ಯಾಯಾಲಯ ಅನುಮತಿ ನೀಡಿದೆ. ಆದರೆ ಲಂಡನ್ ಗೆ ತೆರಳಲು ಅನುಮತಿ ನೀಡಿಲ್ಲ. ಅಲ್ಲದೆ ವಿದೇಶ ಪ್ರವಾಸದ ದಿನಾಂಕ, ಸಮಯದ ವಿವರವನ್ನು ನೀಡಬೇಕು. ಅಲ್ಲದೇ ನಿಗದಿತ ದಿನಾಂಕಕ್ಕೂ  ಮೊದಲೇ ಭಾರತಕ್ಕೆ ವಾಪಸ್ ಆಗಬೇಕೆಂದು ಕೋರ್ಟ್ ರಾಬರ್ಟ್ ವಾದ್ರಾಗೆ ಸೂಚನೆ ನೀಡಿದೆ.


ಲಂಡನ್ ನಲ್ಲಿ 1.9 ಮಿಲಿಯನ್ ಪೌಂಡ್ ಮೌಲ್ಯದ ನಿವೇಶನ ಖರೀದಿಸುವ ವೇಳೆ ಅಕ್ರಮ ಹಣ ವರ್ಗಾವಣೆ ಸೇರಿದಂತೆ ವಿವಿಧ ಪ್ರಕರಣಗಳನ್ನು ಎದುರಿಸುತ್ತಿರುವ ರಾಬರ್ಟ್ ವಾದ್ರಾ, ವಿದೇಶ ಪ್ರಯಾಣಕ್ಕೆ ಮನವಿ ಸಲ್ಲಿಸಿದ್ದರು. ಅಲ್ಲದೆ, ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಾದ್ರಾ  ಮಂಗಳವಾರ ಮತ್ತೆ ED ಮುಂದೆ ಹಾಜರಾಗಬೇಕಿದೆ.


ಏಪ್ರಿಲ್ 1 ರಂದು ವಾದ್ರಾಗೆ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿತ್ತಾದರೂ ವಿದೇಶ ಪ್ರಯಾಣಕ್ಕೆ ಅನುಮತಿ ನೀಡಿರಲಿಲ್ಲ. ಅಲ್ಲದೆ, ಯಾವುದೇ ಸಾಕ್ಷ್ಯವನ್ನು ನಾಶಮಾಡಬಾರದು ಮತ್ತು ಯಾವುದೇ ಸಾಕ್ಷಿಯ ಮೇಲೆ ಪ್ರಭಾವ ಬೀರಬಾರದು ಎಂದು ಕೋರ್ಟ್ ವಾದ್ರಾಗೆ ಸೂಚನೆ ನೀಡಿದೆ.


ಏತನ್ಮಧ್ಯೆ, ವಾದ್ರಾ ಅವರ ಆಪ್ತ ಮನೋಜ್ ಅರೋರಾಗೂ ಸಹ ಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ. ಈ ಹಿಂದೆ, ದೆಹಲಿ ಹೈಕೋರ್ಟ್ ವಾದ್ರಾ ಮತ್ತು ಅರೋರಾಗೆ ನಿರೀಕ್ಷಣಾ ಜಾಮೀನು ಮಂಜೂರು ಪ್ರಶ್ನಿಸಿ ಇಡಿ ಮನವಿ ಸಲ್ಲಿಸಿತ್ತು. ಬಳಿಕ ನ್ಯಾಯಾಲಯ ಈ ಇಬ್ಬರಿಗೂ ನೋಟಿಸ್ ಜಾರಿ ಮಾಡಿದ್ದು, ಇಡಿ ಸವಾಲಿಗೆ ಉತ್ತರಿಸುವಂತೆ ಹೇಳಿದೆ. ಈ ಪ್ರಕರಣದ ಮುಂದಿನ ವಿಚಾರಣೆ  ಜುಲೈ 17ಕ್ಕೆ ನಿಗದಿಯಾಗಿದೆ.