ಚೆನ್ನೈ: ಬಂಗಾಳ ಕೊಲ್ಲಿಯಲ್ಲಿ ಕಾಣಿಸಿಕೊಂಡಿರುವ 'ಗಜ' ಚಂಡ ಮಾರುತವು ತಮಿಳುನಾಡು ಕರಾವಳಿಗೆ ಅಪ್ಪಳಿಸಲಿದ್ದು, ಗಂಟೆಗೆ 100 ಕಿ.ಮೀ. ವೇಗದಲ್ಲಿ ಪಂಬನ್‌ -ಕಡಲೂರು ತೀರ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. 


COMMERCIAL BREAK
SCROLL TO CONTINUE READING

ತಮಿಳುನಾಡು ಮತ್ತು ಪುದುಚೆರಿ ಕರಾವಳಿ ತೀರ ಪ್ರದೇಶಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಈ ಹಿನ್ನೆಲೆಯಲ್ಲಿ ಕುಡಲೂರು, ನಾಗಪಟ್ಟಿಣಂ, ರಾಮನಾಥಪುರಂ, ತಿರುವಾರೂರು, ಪುದುಕೊಟ್ಟೈ ಮತ್ತು ತಂಜಾವೂರು ಜಿಲ್ಲೆಗಳ  ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. 


ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆಗಳೂ ನಡೆಸಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ತಮಿಳುನಾಡಿನಲ್ಲಿ 30,500 ರಕ್ಷಣಾ ಸಿಬ್ಬಂದಿಯನ್ನು ಸಜ್ಜುಗೊಳಿಸಲಾಗಿದೆ. ಕಡಲೂರು ಮತ್ತು ಪಂಬನ್‌ ನಡುವೆ ಗಜ ಅಪ್ಪಳಿಸಲಿದೆ. ಈಗಾಗಲೇ ಸಾಕಷ್ಟು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ. 


ಗಂಟೆಗೆ 100 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ. ಮೀನುಗಾರರನ್ನು ಈಗಾಗಲೇ ವಾಪಸ್‌ ಕರೆಸಲಾಗಿದೆ. 24 ತಾಸುಗಳ ಅವಧಿಯಲ್ಲಿ ಗಾಳಿ ಸಹಿತ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ತಮಿಳುನಾಡಿನ ಅಧಿಕಾರಿಗಳು ತಿಳಿಸಿದ್ದಾರೆ.


ನಾಗಪಟ್ಟಣಂ ಮತ್ತು ಕಡಲೂರು ಜಿಲ್ಲೆಗಳಲ್ಲಿ ಚಂಡಮಾರುತದ ಪ್ರಭಾವ ತೀವ್ರವಾಗಿರಲಿದ್ದು, ಮೊಬೈಲ್‌ ಸಂಪರ್ಕ ಕಾಯ್ದುಕೊಳ್ಳುವ ಸಲುವಾಗಿ 'ಸೆಲ್‌ ಆನ್‌ ವೀಲ್‌' (ಮೂವಿಂಗ್‌ ಟವರ್‌) ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.