ನವದೆಹಲಿ: 'ವಾಯು' ಚಂಡಮಾರುತದಿಂದಾಗಿ ಭಾರತೀಯ ರೈಲ್ವೇ 77 ರೈಲುಗಳನ್ನು ರದ್ದು ಮಾಡಿದೆ. ಇದಲ್ಲದೆ, 33 ಇತರ ರೈಲುಗಳನ್ನು ಭಾಗಶಃ ಸ್ಥಗಿತಗೊಳಿಸಲಾಗಿದೆ ಎಂದು ಪಶ್ಚಿಮ ರೈಲ್ವೆ ಗುರುವಾರ ಮಾಹಿತಿ ನೀಡಿದೆ.


COMMERCIAL BREAK
SCROLL TO CONTINUE READING

ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಹುಟ್ಟಿಕೊಂಡಿದ್ದ 'ವಾಯು' ಚಂಡಮಾರುತ ಇಂದು ಮಧ್ಯಾಹ್ನ ಗುಜರಾತ್ ಕರಾವಳಿಗೆ ಅಪ್ಪಳಿಸಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ, ವಾಯು ಚಂಡಮಾರುತ ತನ್ನ ಪಥ ಬದಲಿಸಿರುವ ಹಿನ್ನೆಲೆಯಲ್ಲಿ  ಗುಜರಾತ್​ಗೆ ಅಪ್ಪಳಿಸುವುದಿಲ್ಲ. ಅದಾಗ್ಯೂ, ವೆರಾವಲ್, ಪೋರಬಂದರ್ ಹಾಗೂ ದ್ವಾರಕಾ ಕರಾವಳಿ ತೀರದಲ್ಲಿ ಹಾದುಹೋಗಲಿದೆ. ಇದರಿಂದಾಗಿ ಕರಾವಳಿ ಪ್ರದೇಶಗಳಲ್ಲಿ ಭಾರೀ ಬಿರುಗಾಳಿ ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.


ದೇಶದ ಹಲವು ಭಾಗಗಳಲ್ಲಿ 'ವಾಯು' ಚಂಡಮಾರುತ ತನ್ನ ಪ್ರಭಾವ ಬೀರಲಿದ್ದು, ಭಾರತೀಯ ರೈಲ್ವೆ ಇಲಾಖೆ ಮುನ್ನೆಚ್ಚರಿಕಾ ಕ್ರಮವಾಗಿ ಹಲವು ರೈಲುಗಳನ್ನು ರದ್ದುಗೊಳಿಸಿದೆ.


"ಗುಜರಾತ್ ಮೇಲೆ ವಾಯು ಚಂಡಮಾರುತದ ಪ್ರಭಾವ ಬೀರುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿರುವುದನ್ನು ಪರಿಗಣಿಸಿ, ವೆಸ್ಟರ್ನ್ ರೈಲ್ವೆ 77 ಪ್ರಮುಖ ರೈಲುಗಳ ಕಾರ್ಯಾಚರಣೆಯನ್ನು ರದ್ದುಗೊಳಿಸಿದೆ ಮತ್ತು 33 ಇತರ ಪ್ರಮುಖ ರೈಲುಗಳ ಕಾರ್ಯಾಚರಣೆಯನ್ನು ಭಾಗಶಃ ನಿಲ್ಲಿಸಲು ನಿರ್ಧರಿಸಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಇದಲ್ಲದೆ ವೆರವಾಲ್, ಒಖಾ, ಪೋರಬಂದರ್, ಭಾವನಗರ, ಭುಜ್ ಮತ್ತು ಗಾಂಧಿಧಾಮ ಸೇರಿದಂತೆ ಹಲವು ಚಂಡಮಾರುತ ಪೀಡಿತ ಪ್ರದೇಶಗಳಲ್ಲಿ ಪ್ರಯಾಣಿಕರನ್ನು ರಕ್ಷಿಸಲು ಪಶ್ಚಿಮ ರೈಲ್ವೇ ಹಲವಾರು ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಅವರು ಹೇಳಿದರು.


ವೆರಾವಲ್-ಅಮ್ರೆಲಿ, ಅಮ್ರೆಲಿ-ಜುನಾಗಢ್, ಡೆಲ್ವಾಡಾ-ವೈರವಾಲ್ ಪ್ರದೇಶಗಳಿಗೆ ಬುಧವಾರ ಮತ್ತು ಗುರುವಾರ ರೈಲುಗಳನ್ನು ರದ್ದುಗೊಳಿಸಲಾಗಿದೆ.