ನವದೆಹಲಿ​: ಒಡಿಶಾ ರಾಜ್ಯಕ್ಕೆ ಫೋನಿ ಚಂಡಮಾರುತ ಅಪ್ಪಳಿಸಿದ ಬೆನ್ನಲ್ಲೇ ಇದೀಗ ಗುಜರಾತ್ ರಾಜ್ಯಕ್ಕೆ 'ವಾಯು' ಚಂಡಮಾರುತ ಅಪ್ಪಳಿಸುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. 


COMMERCIAL BREAK
SCROLL TO CONTINUE READING

ವಾಯುಭಾರ ಕುಸಿತದಿಂದ ಅರಬ್ಬೀ​ ಸಮುದ್ರದಲ್ಲಿ 'ವಾಯು' ಚಂಡಮಾರುತ ಎದ್ದಿದ್ದು, ಗುರುವಾರ ಗುಜರಾತ್​ ಕರಾವಳಿ ಪ್ರವೇಶಿಸಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಜನರು ಎಚ್ಚರಿಕೆಯಿಂದ ಇರಲು ಭಾರತೀಯ ಹವಾಮಾನ ಇಲಾಖೆ ಸೂಚಿಸಿದೆ.


ಅಷ್ಟೇ ಅಲ್ಲದೆ, ಅತಿ ವೇಗದಲ್ಲಿ ಗಾಳಿ ಬೀಸಲಿದ್ದು, ಗುಜರಾತ್, ಕರ್ನಾಟಕ ಮತ್ತು ಕೇರಳದ ಕರಾವಳಿ ಪ್ರದೇಶಗಳಲ್ಲಿ ಭೂಕುಸಿತ ಉಂಟಾಗುವ ಸಾಧ್ಯತೆಗಳಿವೆ. ಅಲ್ಲದೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.


ಗುಜರಾತ್​ನ ಪೋರ್​ಬಂದರ್​, ಮಹುವಾ, ವೆರಾವಲ್​ ಮತ್ತು ದಿಯು ಪ್ರದೇಶಗಳಿಗೆ ಸುಮಾರು 110ರಿಂದ 120 ಕಿ.ಮೀ. ವೇಗದಲ್ಲಿ 'ವಾಯು' ಚಂಡಮಾರುತ ಪ್ರವೇಶಿಸಲಿದ್ದು, ನಂತರ 135 ಕಿ.ಮೀ.ವರೆಗೂ ವೇಗ ಹೆಚ್ಚಿಸಿಕೊಂಡು ಬೀಸಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.


ಈಗಾಗಲೇ ಗುಜರಾತ್ ನಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ತಗ್ಗು ಪ್ರದೇಶಗಳಲ್ಲಿ ವಾಸಿಸುವ ಸುಮಾರು 3 ಲಕ್ಷ ಜನರನ್ನು ಸ್ಥಳಾಂತರಿಸುವ ಸಾಧ್ಯತೆಯಿದ್ದು, 700 ಆಶ್ರಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಅಲ್ಲದೆ, ಜೂನ್ 15ರ ವರೆಗೆ ರಾಜ್ಯಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. 


ವಿಪತ್ತು ಪರಿಹಾರ ಈಗಾಗಲೇ  ಕಾರ್ಯಾಚರಣೆಗೆ NDRFನ 45 ಮಂದಿಯ 26 ತಂಡಗಳು ಆಗಮಿಸಿದ್ದು, ಗುಜರಾತ್ ಸರ್ಕಾರದ ಮನವಿಯ ಮೇರೆಗೆ 10 ಹೆಚ್ಚುವರಿ ತಂಡಗಳನ್ನು ನಿಯೋಜಿಸಲಾಗಿದೆ.