ಮೂಲ ಲೇಖಕರು: ದಯಾಶಂಕರ್ ಮಿಶ್ರಾ


COMMERCIAL BREAK
SCROLL TO CONTINUE READING

ನಗೆ ಪರಿಚಯದವರೊಬ್ಬರು ಯಾವಾಗ ಬಂದರೂ ಅಚಾನಕ್ ಆಗೇ ಬರ್ತಾರೆ. ಬಂದಾಗೆಲ್ಲಾ ಬಹಳ ಸಂತೋಷದಿಂದ, ಉತ್ಸಾಹದಿಂದ ಭೇಟಿ ಆಗ್ತಾರೆ. ಆದರೆ, ಅವರ ಬಗ್ಗೆ ಏನೂ ಹೇಳಿಕೊಳ್ಳುವುದಿಲ್ಲ, ಸಮಸ್ಯೆಗಳನ್ನೂ ಹಂಚಿಕೊಳ್ಳುವುದಿಲ್ಲ. ಹೀಗೆ, ಹಿಂದೊಮ್ಮೆ ಅವರು ಬಂದಾಗ "ಯಾರ ಮನೆಗಾದರೂ ಹೋಗಬೇಕೆಂದಿದ್ದರೆ ಹೇಳಿ, ನಾನು ಡ್ರಾಪ್ ಮಾಡ್ತೀನಿ" ಎಂದು ಕೇಳಿದ್ದೆ. ಅದಕ್ಕವರು, "ಇಲ್ಲ, ಅಷ್ಟಕ್ಕೂ ಈಗ ಜನ ತಮ್ಮ ಮನೆಗೆ ಕರೆಯೋದನ್ನೇ ಕಡಿಮೆ ಮಾಡಿದ್ದಾರೆ" ಅಂದರು. ಅವರ ಮಾತು ಕೇಳಿ ಏನೋ ಸಮಸ್ಯೆಯಿದೆ ಅಂತ ಅನಿಸಿ, "ಏನಾಯಿತು? ಹೇಳಿ" ಅಂತ ಕೇಳಿದೆ. 


ಆಗ ಅವರು, "ನನ್ನ ಬಾಲ್ಯ ಸ್ನೇಹಿತನೊಬ್ಬ ದೆಹಲಿಯಲ್ಲಿದ್ದಾನೆ. ಪೋನ್ ಮಾಡಿ ಮಾತನಾಡಿದಾಗಲೆಲ್ಲ ಇಲ್ಲಿಗೆ ಬಂದಾಗ ಭೇಟಿಯಾಗೋದು ಮರೆಯಬೇಡ ಅಂತ ಹೇಳ್ತಾನೆ. ಇಲ್ಲಿಗೆ ಬಂದಾಗಲೆಲ್ಲಾ ಫೋನ್ ಮಾಡುತ್ತೇನೆ, ಈ ಬಾರಿ ಆಗಲ್ಲ, ಮುಂದಿನ ಬಾರಿ ಭೇಟಿ ಆಗೋಣ ಎಂದು ಭೇಟಿಯನ್ನು ಮುಂದೂಡುತ್ತಾನೆ. ಹಾಗಾಗಿ ನಾನು ಈ ಬಾರಿ ಫೋನ್ ಮಾಡಿ, ಬೆಳಿಗ್ಗೆ 8 ಗಂಟೆಗೇ ಬರುತ್ತೇನೆ ಅಂತ ಹೇಳಿದೆ. ಅದಕ್ಕಾತ, "ಹೌದಾ, ನಾನು ಬರೋದು ರಾತ್ರಿ 8 ಗಂಟೆ ಆಗುತ್ತದೆ, ನಿನ್ನನ್ನು ಭೇಟಿ ಆಗಲು ಸಾಧ್ಯವಿಲ್ಲ ಎನ್ನೋದು ನಿಂಗೆ ಯಾಕೆ ಅರ್ಥ ಆಗುತ್ತಿಲ್ಲ. ನಾನು ಮನೆಗೆ ಬರುವುದರೊಳಗೆ ರಾತ್ರಿಯಾಗಿರುತ್ತದೆ ಎಂದ. ಅದಕ್ಕೆ ನಾನು "ಹೊರಗಡೆಯಾದರೂ ಭೇಟಿಯಾಗು" ಎಂದೆ. ಅದಕ್ಕೆ ಅವನು, "ದೆಹಲಿಯಲ್ಲಿ ಭೇಟಿಯಾಗಲು ಸಾಧ್ಯವಿಲ್ಲ, ಟೈಮ್ ಇಲ್ಲ, ನಿಮ್ಮೂರಿಗೆ ಬಂದಾಗ ಭೇಟಿ ಆಗುತ್ತೇನೆ" ಎಂದ ಅಂದರು.


ಹೀಗಾಗಿ ಅವರು ತಮ್ಮ ಬಾಲ್ಯದ ಮತ್ತು ಕಾಲೇಜು ಸ್ನೇಹಿತನನ್ನು ಭೇಟಿಯಾಗದೇ ತಮ್ಮೂರಿಗೆ ಹಿಂದಿರುಗಿದರು. ಹಾಗೆ ನೋಡಿದರೆ, ಅವರ ಸ್ನೇಹಿತರ ಪಟ್ಟಿ ಬಹಳ ದೊಡ್ಡದಿದೆ. ಆದರೆ, ಅವರಲ್ಲಿ ಅಗತ್ಯತೆ ಮತ್ತು ನಿರೀಕ್ಷೆಗಳು ಇಲ್ಲವಾದ್ದರಿಂದ ಏನೂ ಮಾತನಾಡದೆ ಬೇಸರದಿಂದ ಹಿಂದಿರುಗಿದರು. 


ಡಿಯರ್ ಜಿಂದಗಿ: ಭಯ್ಯೂಜಿ ಮಹಾರಾಜರ ಆತ್ಮಹತ್ಯೆ ಟಿಪ್ಪಣಿ ಹಿನ್ನಲೆಯಲ್ಲಿ...


ಇಲ್ಲಿ ಪ್ರಶ್ನೆ ಇರೋದು, ಸ್ನೇಹಿತರು ಇವರನ್ನು ಭೇಟಿಯಾದರೋ, ಇಲ್ಲವೋ ಎಂಬುದಲ್ಲ. ಇಲ್ಲಿ ಅವರ ಸ್ನೇಹಿತರು ಹೇಳಿದ್ದನ್ನು ಮಾಡಲಾಗದಿರುವುದು ಮತ್ತು ಅನಿಸಿದ್ದನ್ನು ಹೇಳಲಾಗದಿರುವುದನ್ನು ಗಮನಿಸಬಹುದು. ಹೀಗಾಗಿಯೇ ನಮ್ಮಲ್ಲಿ ಬಹುಪಾಲು ಜನ ತಮ್ಮ ಸ್ನೇಹಿತರಿಂದ ದೂರ ಉಳಿದಿದ್ದಾರೆ. ಏಕೆಂದರೆ ಅವರು ಎಂದೂ ಭೇಟಿಯಾಗುವುದಿಲ್ಲ. ಏಕೆಂದರೆ ಅವರು ಮತ್ತೊಬ್ಬರ ಭೇಟಿಗೆ ಹೆಚ್ಚು ಮಹತ್ವವನ್ನೇ ನೀಡುವುದಿಲ್ಲ. 


ನಿಜ ಹೇಳಬೇಕೆಂದರೆ, ಸ್ನೇಹಿತರನ್ನು 'ಭೇಟಿ' ಆಗುವುದು ಮಾನಸಿಕ ಖಿನ್ನತೆಗೆ, ಒತ್ತಡಕ್ಕೆ ಉತ್ತಮ ಚಿಕಿತ್ಸೆ. ಇದು ಸಂಬಂಧಗಳ ಬೆಸುಗೆಗೆ ಆಕ್ಸಿಜನ್ ಇದ್ದಂತೆ. ಇದರಿಂದ ಇತರರ ಮನಸ್ಸನ್ನು ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತದೆ. ಹಾಗಾಗಿ ಭೇಟಿಯಾಗುವುದನ್ನು ಎಂದಿಗೂ ನಿಲ್ಲಿಸಬೇಡಿ. ಇದು ಮನುಷ್ಯ ಸಂಬಂಧಗಳನ್ನು ಉಳಿಸಿಕೊಳ್ಳಲು ಇರುವ ಮುಖ್ಯ ಅಂಶ.


ಇತ್ತೀಚಿನ ದಿನಗಳಲ್ಲಿ ನಾವು 'ಭೇಟಿ'/ 'meet' ಎಂಬ ಪದದ ಅರ್ಥವನ್ನೇ ಮರೆತಿದ್ದೇವೆ. ಮತ್ತೊಬ್ಬರನ್ನು ಭೇಟಿ ಆಗುವುದರಿಂದ ತಪ್ಪಿಸಿಕೊಳ್ಳುವುದು, ಮುಂದೂಡುವುದು ಹೇಗೆ ಎಂಬುದರ ಬಗ್ಗೆ ಚಿಂತಿಸುತ್ತೇವೆ. ಯಾರಿಂದಾದರೂ ಕೆಲಸ ಆಗಬೇಕಿದ್ದರೆ, ಅವರಿಂದ ಲಾಭ ಇದ್ದರೆ ಮಾತ್ರ ಭೇಟಿಯಾಗುವವರ ಸಂಖ್ಯೆ ಇಂದು ಹೆಚ್ಚಾಗುತ್ತಿದೆ. ಆದರೆ, ಈ ರೀತಿಯ ಮನೋಭಾವದಿಂದಾಗಿ ಈಗಾಗಲೇ ಇರುವ ಸ್ನೇಹ ಹಾಳಾಗುತ್ತದೆ. ಇದರಿಂದ ಅವರ ನಡುವಿನ ಸಂಬಂಧದಲ್ಲಿ ಬಿರುಕುಂಟಾಗಿ, ಮರಳಿ ಸರಿಪಡಿಸುವುದು ಅಸಾಧ್ಯವಾಗುತ್ತದೆ. ಒಮ್ಮೆ ಸಂಬಂಧಗಳಲ್ಲಿ ಬಿರುಕುಂಟಾದರೆ ಅದನ್ನು ಮತ್ತೊಮ್ಮೆ ಸರಿಪಡಿಸುವುದು ಸಾಧ್ಯವಿಲ್ಲ. ಅದು ಬಹಳ ಕಷ್ಟ. 


ಡಿಯರ್ ಜಿಂದಗಿ: ಅಂತಹ ಸ್ನೇಹಿತನೊಬ್ಬ ಇರಲೇಬೇಕು...


ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಮೊಬೈಲ್, ಇಂಟರ್ನೆಟ್ ಆಗಮನದಿಂದ ಸ್ನೇಹಿತರನ್ನು ಭೇಟಿಯಾಗುವುದು ಮತ್ತಷ್ಟು ಕಷ್ಟವಾಗಿದೆ. ಏಕೆಂದರೆ, ಪ್ರತಿಯೊಂದು ಭೇಟಿಯಲ್ಲೂ ಏನಾದರೂ ಲಾಭ ಇದೆಯೇ ಎಂದು ನೋಡುತ್ತೇವೆ. ಯಾರನ್ನೂ ಮನಃಪೂರ್ವಕವಾಗಿ, ಯಾವುದೇ ನಿರೀಕ್ಷೆಗಳಿಲ್ಲದೆ ಭೇಟಿಯಾಗುವುದೇ ಇಲ್ಲ. ಸಂತೋಷವನ್ನು ಖರೀದಿಸಲು ವ್ಯಾಪಾರಿಗಳಂತೆ ಭೇಟಿಯಾಗುತ್ತೇವೆಯೇ ಹೊರತು ಸ್ನೇಹಿತರಾಗಿದ್ದರೂ ಸ್ನೇಹಿತರಂತೆ ಭೇಟಿಯಾಗುವುದೇ ಇಲ್ಲ. ಇದರಿಂದ 'ಭೇಟಿ' ಎಂಬುದರಲ್ಲಿ ದೊರೆಯುವ ಸಂತೋಷ ನಮ್ಮಿಂದ ದೂರವಾಗುತ್ತಿದೆ.


ಹಾಗಾಗಿ ನಿಮ್ಮ ಮನೆಯವರು, ಕುಟುಂಬದವರು, ಬಂಧುಗಳು, ಸ್ನೇಹಿತರಲ್ಲಿ ಎಷ್ಟು ಜನರನ್ನು ಭೇಟಿ ಆಗಲು ಸಾಧ್ಯವೋ ಅಷ್ಟು ಜನರನ್ನು ಭೇಟಿಯಾಗಲು ನಿಮ್ಮ ಮನಸ್ಸು ಮತ್ತು ಹೃದಯಕ್ಕೆ ಬುದ್ಧಿ ಹೇಳಿ. ಆಗ, ಕೇವಲ ಗಾಳಿ ಬರಲು ಮಾತ್ರವಲ್ಲ, ಇತರರನ್ನು ಭೇಟಿಯಾಗಲೂ ಸಹ ನಿಮ್ಮ ಮನೆಯ ಬಾಗಿಲನ್ನು ತೆರೆಯುತ್ತದೆ. 


ನೀವು ಸದಾ ಕೆಲಸದಲ್ಲಿ ಬ್ಯುಸಿ ಆಗಿರುವ ಜನರನ್ನೇ ನೋಡಿ, ಅವರ ಬಳಿ ಯಾವಾಗಲೂ ಸಮಯ ಇರುವುದೇ ಇಲ್ಲ. ಅವರಲ್ಲಿ ಸಮಯ ಎಂಬುದು ಬಹಳ ಕಡಿಮೆ ಇರುತ್ತದೆ. ಆದರೆ, ಸ್ನೇಹಿತರು, ಮನುಷ್ಯತ್ವ, ಅಧ್ಯಯನ, ಆಲೋಚನೆ ಇವೆಲ್ಲವನ್ನೂ ಹೊರತುಪಡಿಸಿ ಇತರ ಎಲ್ಲಾ ಕೆಲಸಗಳಿಗೂ ಅವರು ಸಮಯ ವ್ಯರ್ಥಮಾಡುತ್ತಾರೆ. ಹೀಗಾಗಿಯೇ ಅವರು ತಮ್ಮ ಬಳಿ ಯಾವುದಕ್ಕೂ ಸಮಯ ಇಲ್ಲ ಎಂದು ಹೇಳುತ್ತಾರೆ. ಆದರೆ, ಇಲ್ಲಿ ಗಂಭೀರವಾಗಿ ಆಲೋಚಿಸಬೇಕಾದ ಅಂಶವೆಂದರೆ, ಇವರ ಸಮಯ ಹೋಗುವುದಾದರೂ ಎಲ್ಲಿಗೆ??


ಡಿಯರ್ ಜಿಂದಗಿ: ಯಾರಿಂದ ಸೋಲುತ್ತಿದೆ ಈ ಲಕ್ಷಾಧಿಪತಿಗಳ ಮನಸ್ಸು


ಸಮಯಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತಿದ್ದವರೆಂದರೆ ನೆಲ್ಸನ್ ಮಂಡೇಲಾ ಅವರು. ಒಮ್ಮೆ ನೆಲ್ಸನ್ ಮಂಡೇಲಾ ಅವರು ತಮ್ಮ ಸ್ನೇಹಿತರೊಬ್ಬರಿಗೆ ಒಂದು ದೊಡ್ಡ ಪತ್ರ ಬರೆದು, ಅದರ ಕೊನೆ ಸಾಲಿನಲ್ಲಿ "ಸಮಯ ಕಡಿಮೆ ಇತ್ತು, ಹಾಗಾಗಿ ಪತ್ರ ದೀರ್ಘವಾಗಿದೆ" ಎಂದು ಬರೆದಿದ್ದರು. ಇದನ್ನು ತಮಾಷೆಗಾಗಿ ಬರೆದಿದ್ದರು ಎಂದುಕೊಂಡಿರಾ? ಖಂಡಿತಾ ಇಲ್ಲ! "ಸಮಯ ಕಡಿಮೆ ಇತ್ತು. ಹಾಗಾಗಿ ಪತ್ರ ದೊಡ್ದದಾಗಿದೆ" ಈ ಸಾಲಿನ ನಿಜವಾದ ಅರ್ಥ ಏನೆಂದರೆ, ಕಡಿಮೆ ಮತ್ತು ಸಂಕ್ಷಿಪ್ತವಾಗಿ ಎಲ್ಲವನ್ನೂ ಬರೆಯಲು ಬಹಳ ಆಲೋಚಿಸಬೇಕಾಗುತ್ತದೆ. ಆದರೆ, ಅದ್ಯಾವುದನ್ನೂ ಮಾಡದೇ ಮನಸ್ಸಿಗೆ ಅನಿಸಿದ ಎಲ್ಲಾ ಮಾತುಗಳನ್ನು ನೇರವಾಗಿ, ವೇಗವಾಗಿ ಹೇಳಬಹುದು ಎಂಬುದು.


ವಿಶ್ವದಲ್ಲೇ ಅತ್ಯಂತ ಪ್ರಸಿದ್ಧ ಸೃಜನಾತ್ಮಕ, ಕ್ರಿಯಾಶೀಲ ಮತ್ತು ರಾಜಕೀಯ ಕಾರ್ಯಗಳಲ್ಲಿ ತೊಡಗಿದ್ದ ನೆಲ್ಸನ್ ಮಂಡೇಲಾ, ಮಹಾತ್ಮ ಗಾಂಧಿ, ವಿಜ್ಞಾನಿ ಐನ್'ಸ್ಟೀನ್ ಇವರೆಲ್ಲರ ಬಳಿಯೂ ಕೂಡ ಸಮಯ ಇರಲಿಲ್ಲ. ಆದರೆ, ಅವರಲ್ಲಿ ಜೀವನದ ದೃಷ್ಟಿಕೋನ, ಸಂಬಂಧಗಳ ಪ್ರಾಮುಖ್ಯತೆಯ ಅರಿವು ಸ್ಪಷ್ಟವಾಗಿತ್ತು. ಹಾಗಾಗಿ ಅವರಲ್ಲಿ ಇದಕ್ಕೆಲ್ಲ ಸಾಕಷ್ಟು ಸಮಯ ಇತ್ತು. 


ಹಾಗಾದರೆ, ಈ ಭಾನುವಾರ ಯಾರಾದರೂ ಬರುತ್ತಿದ್ದರೆ ಅಥವಾ ನಿಮ್ಮ ಸ್ನೇಹಿತರನ್ನು ಭೇಟಿಗೆ ಆಹ್ವಾನಿಸುತ್ತಿದ್ದರೆ, "ಸಮಯ ಇದ್ದರೆ ಮನೆಗೆ ಬಂದು ಹೋಗಿ" ಅಂತ ಮಾತ್ರ ಹೇಳಬೇಡಿ! ಸಮಯದ ಜೊತೆ ಅವರನ್ನು ಆಹ್ವಾನಿಸಿ! ಭೇಟಿಯಾಗಿ ಮತ್ತು ಸಂತೋಷದಿಂದಿರಿ.


ಕನ್ನಡದಲ್ಲಿ 'ಡಿಯರ್ ಜಿಂದಗಿ' ಎಲ್ಲಾ ಲೇಖನಗಳನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ: ಡಿಯರ್ ಜಿಂದಗಿ


ಗುಜರಾತಿ  ಭಾಷೆಯಲ್ಲಿ ಓದಲು ಈ ಲಿಂಕ್ ಕ್ಲಿಕ್ ಮಾಡಿ : ડિયર જિંદગી: સમય મળે તો ક્યારેક ઘરે આવજો...


ಹಿಂದಿ ಭಾಷೆಯಲ್ಲಿ ಎಲ್ಲಾ ಲೇಖನಗಳನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ  : डियर जिंदगी
(https://twitter.com/dayashankarmi)


(ಈ ಲೇಖನದ ಕುರಿತಾಗಿ ನಿಮ್ಮ ಪ್ರಶ್ನೆ ಮತ್ತು ಅಭಿಪ್ರಾಯಗಳನ್ನು ತಿಳಿಸಲು ಮೆಸೇಜ್ ಮಾಡಿ:  https://www.facebook.com/dayashankar.mishra.54)