ಮುಂಬೈ: ಅಂಧೇರಿ (ಪೂರ್ವ)ದಲ್ಲಿರುವ ರಾಜ್ಯ ಕಾರ್ವಿುಕರ ವಿಮಾ (ಇಎಸ್​ಐ) ಆಸ್ಪತ್ರೆಯಲ್ಲಿ ಸೋಮವಾರ ಸಂಭವಿಸಿದ ಅಗ್ನಿ ದುರಂತದಲ್ಲಿ ಎರಡು ತಿಂಗಳ ಮಗು, ಓರ್ವ ವೈದ್ಯರೂ ಸೇರಿದಂತೆ 8 ಮಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ 10 ಮಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ. 


COMMERCIAL BREAK
SCROLL TO CONTINUE READING


ಅಂಧೇರಿ ಉಪನಗರದ ಮರೋಲ್ ನಲ್ಲಿರುವ ಸರಕಾರ ನಡೆಸುವ ಇಎಸ್ ಐಸಿ ಕಾಮ್ ಗರ್ ಆಸ್ಪತ್ರೆಯಲ್ಲಿ ಸೋಮವಾರದ ಸಂಜೆ ನಾಲ್ಕು ಗಂಟೆ ಹೊತ್ತಿಗೆ ಅಗ್ನಿ ಆಕಸ್ಮಿಕ ಸಂಭವಿಸಿತ್ತು. ಅಗ್ನಿ ದುರಂತಕ್ಕೆ ಕಾರಣ ತಿಳಿದುಬಂದಿಲ್ಲ. ಆದರೆ, ಏಳು ಅಂತಸ್ತಿನ ಕಟ್ಟಡದ ಗ್ರೌಂಡ್ ಫ್ಲೋರ್ ನಲ್ಲಿ ರಬ್ಬರ್ ನಂಥ ಕೆಲವು ಸಾಮಗ್ರಿಗಳನ್ನು ಸಂಗ್ರಹಿಸಲಾಗಿತ್ತು. ಬೆಂಕಿ ಇಲ್ಲಿಂದಲೇ ಆರಂಭವಾಗಿದೆ ಎನ್ನಲಾಗುತ್ತಿದ್ದು, ತನಿಖೆ ನಡೆಯುತ್ತಿದೆ.



ಮಾಹಿತಿ ಪ್ರಕಾರ, 19 ಜನರನ್ನು ಕೂಪರ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು, ಅಲ್ಲಿ ಇಬ್ಬರು ಮೃತಪಟ್ಟಿದ್ದಾರೆ. 33 ಜನರನ್ನು ಸೆವೆನ್ ಹಿಲ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಅಲ್ಲಿ ಮೂವರು ಮೃತಪಟ್ಟಿರುವ ಬಗ್ಗೆ ಘೋಷಿಸಲಾಗಿದೆ. ಇದಲ್ಲದೆ ಅಂಧೇರಿಯ ಹೋಲಿ ಸ್ಪಿರಿಟ್ ಆಸ್ಪತ್ರೆಯಲ್ಲಿ 40 ಜನರನ್ನು ದಾಖಲಿಸಲಾಗಿತ್ತು ಅಲ್ಲಿ ಓರ್ವರನ್ನು ಮೃತಪಟ್ಟಿದ್ದಾರೆ ಎನ್ನಲಾಗಿತ್ತು. ಈ ಸಂಖ್ಯೆ ಸೋಮವಾರ ರಾತ್ರಿಯ ವರೆಗಿನದ್ದಾಗಿದೆ. ಸೋಮವಾರ ರಾತ್ರಿವರೆಗೆ 6 ಮಂದಿ ಮೃತಪಟ್ಟಿದ್ದರು.  


ಮಂಗಳವಾರ ಬೆಳಿಗ್ಗೆ ಅಪಘಾತದಲ್ಲಿ ಸಾವಿಗೀಡಾದವರ ಸಂಖ್ಯೆ ಎಂಟಕ್ಕೇರಿದೆ.