ಭೋಪಾಲ್‌: ಕಾಂಗ್ರೆಸ್ ನಾಯಕಹಾಗೂ ಭೋಪಾಲ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ದಿಗ್ವಿಜಯ ಸಿಂಗ್ ಗಾಗಿ ಹಠಯೋಗ ಮಾಡಿದ್ದಕ್ಕೆ ಚುನಾವಣಾ ಆಯೋಗ ನೋಟಿಸ್ ಜಾರಿದ ಹಿನ್ನೆಲೆಯಲ್ಲಿ ಉತ್ತರಿಸಿರುವ ಕಂಪ್ಯೂಟರ್ ಬಾಬಾ, 'ಹಠಯೋಗ ಶಿಬಿರಕ್ಕೆ ದಿಗ್ವಿಜಯ್‌ ಸಿಂಗ್‌ ಅವರನ್ನು ನಾವು ಆಹ್ವಾನಿಸಿಲ್ಲ' ಎಂದಿದ್ದಾರೆ.


COMMERCIAL BREAK
SCROLL TO CONTINUE READING

ಚುನಾವಣಾ ಆಯೋಗದ ನೋಟಿಸ್ ಗೆ ಲಿಖಿತ ಹೇಳಿಕೆ ನೀಡಿರುವ ಕಂಪ್ಯೂಟರ್ ಬಾಬಾ, ಹಠಯೋಗ ಕಾರ್ಯಕ್ರಮದ ಖರ್ಚು ವೆಚ್ಚಕ್ಕಾಗಿ ಹಣವನ್ನು ದೇಣಿಗೆಯಿಂದ ಸಂಗ್ರಹಿಸಿದ್ದು, ದಿಗ್ವಿಜಯ್ ಸಿಂಗ್ ಅವರಿಂದ ಹಣವನ್ನೂ ಪಡೆದಿಲ್ಲ, ಅವರನ್ನು ಶಿಬಿರಕ್ಕೆ ನಾವು ಆಹ್ವಾನಿಸಿಯೂ ಇರಲಿಲ್ಲ" ಎಂದಿದ್ದಾರೆ. 


ಕಂಪ್ಯೂಟರ್ ಬಾಬಾ ನಿಜವಾದ ಹೆಸರು ನಾಮದಾಸ್ ತ್ಯಾಗಿಯಾಗಿದ್ದು, ಭೋಪಾಲ್ ನ ಸೈಫಿಯಾ ಕಾಲೇಜು ಮೈದಾನದಲ್ಲಿ ಮೂರು ದಿನಗಳ ಹಠಯೋಗ ಶಿಬಿರವನ್ನು ಏರ್ಪಡಿಸಿದ್ದರು. ಅಲ್ಲಿ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರ ವಿಜಯಕ್ಕಾಗಿ ಹಠಯೋಗ ನಡೆಸಲಾಗಿತ್ತು ಎನ್ನಲಾಗಿದ್ದು, ಅಂದು ದಿಗ್ವಿಜಯ್ ಸಿಂಗ್ ಹಾಗೂ ಅವರ ಪತ್ನಿ ಶಿಬಿರದಲ್ಲಿ ಭಾಗಿಯಾಗಿದ್ದರು.




ಈ ಹಿಂದೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಕಂಪ್ಯೂಟರ್ ಬಾಬಾ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಐದು ವರ್ಷ ಸರ್ಕಾರ ನಡೆಸಿದರೂ ರಾಮ ಮಂದಿರ ನಿರ್ಮಾಣ ಮಾಡಲಿಲ್ಲ. ರಾಮ ಮಂದಿರ ಇಲ್ಲವೆಂದ ಮೇಲೆ ಮೋದಿಯೂ ಇಲ್ಲ ಎಂದು ಹೇಳಿದ್ದರು. ಈ ಸಂಬಂಧ ಬಿಜೆಪಿಯು ಕಂಪ್ಯೂಟರ್ ಬಾಬಾ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.


ಮಧ್ಯಪ್ರದೇಶದ ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸಾಧ್ವಿ ಪ್ರಗ್ಯ ಸಿಂಗ್ ಸ್ಪರ್ಧಿಸುತ್ತಿದ್ದು, ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್ ಅಭ್ಯರ್ಥಿ ದಿಗ್ವಿಜಯ್ ಸಿಂಗ್ ಕಣಕ್ಕೆ ಇಳಿದಿದ್ದಾರೆ. ಹೀಗಾಗಿ ಈ ನಾಯಕರ ಮಧ್ಯೆ ಭರ್ಜರಿ ಪೈಪೋಟಿ ಏರ್ಪಟ್ಟಿದೆ. ಮಧ್ಯಪ್ರದೇಶದ ಸಾಗರ್, ಭೋಪಾಲ್ ಸೇರಿದಂತೆ 8 ಲೋಕಸಭಾ ಕ್ಷೇತ್ರಗಳ ಮತದಾನವು ಮೇ 12ರಂದು ನಡೆಯಲಿದೆ.