ಅತಿ ಕಠಿಣ ಕ್ಷೇತ್ರದಲ್ಲಿ ಸ್ಪರ್ಧಿಸುವ ಸವಾಲು ಸ್ವೀಕರಿಸಿದ ದಿಗ್ವಿಜಯ್ ಸಿಂಗ್ !
ಲೋಕಸಭಾ ಚುನಾವಣೆಯಲ್ಲಿ ಅತಿ ಕಠಿಣ ಕ್ಷೇತ್ರದಲ್ಲಿ ಸ್ಪರ್ಧಿಸಬೇಕೆಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ಹಾಕಿದ್ದ ಸವಾಲನ್ನು ಕಾಂಗ್ರೆಸ್ ನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಸ್ವೀಕರಿಸಿದ್ದಾರೆ.
ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಅತಿ ಕಠಿಣ ಕ್ಷೇತ್ರದಲ್ಲಿ ಸ್ಪರ್ಧಿಸಬೇಕೆಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ಹಾಕಿದ್ದ ಸವಾಲನ್ನು ಕಾಂಗ್ರೆಸ್ ನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಸ್ವೀಕರಿಸಿದ್ದಾರೆ.
ಸಿಎಂ ಕಮಲ್ ನಾಥ್ ಹಾಕಿರುವ ಸವಾಲಿನ ವಿಚಾರವಾಗಿ ಧನ್ಯವಾದ ಅರ್ಪಿಸುತ್ತಾ ಸರಣಿ ಟ್ವೀಟ್ ಗಳನ್ನು ದಿಗ್ವಿಜಯ್ ಸಿಂಗ್ ಮಾಡಿದ್ದಾರೆ.ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಕಮಲ್ ನಾಥ್ ಅಧಿಕಾರ ಸ್ವೀಕರಿಸಿದ ನಂತರ ಇಬ್ಬರು ನಾಯಕರ ನಡುವೆ ಶೀತಲ ಸಮರ ಮುಂದುವರೆದಿದ್ದು, ಈ ಹಿನ್ನಲೆಯಲ್ಲಿ ಈಗ ಅವರು ಹಾಕಿದ ಸವಾಲನ್ನು ಸ್ವೀಕರಿಸುವ ಮೂಲಕ ಪರೋಕ್ಷವಾಗಿ ಸಿಎಂ ಗೆ ಟಾಂಗ್ ನೀಡಿದ್ದಾರೆ.
"ಸವಾಲುಗಳನ್ನು ಸ್ವೀಕರಿಸುವುದು ನನ್ನ ಅಭ್ಯಾಸ ,1977 ರಲ್ಲಿ ಜನತಾ ಪಕ್ಷದ ಅಲೆ ಇದ್ದಾಗಲೂ ಕೂಡ ನಾನು ರಾಘೋಗಡ್ ನಲ್ಲಿ ಗೆಲುವು ಸಾಧಿಸಿದ್ದೆ.ಆದ್ದರಿಂದ ನಮ್ಮ ನಾಯಕ ರಾಹುಲ್ ಗಾಂಧಿ ಎಲ್ಲಿ ಸ್ಪರ್ಧಿಸಬೇಕೆಂದು ಹೇಳುತ್ತಾರೋ ಅಲ್ಲಿ ಸ್ಪರ್ಧಿಸಲು ನಾನು ಸಿದ್ಧ ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೆ ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸಲು ಸೂಕ್ತ ಸ್ಪರ್ಧಾತ್ಮಕ ವ್ಯಕ್ತಿ ಎಂದು ಹೇಳಿರುವ ಸಿಎಂ ಕಮಲ್ ನಾಥ್ ಅವರಿಗೆ ನಾನು ಅಭಾರಿಯಾಗಿದ್ದೇನೆ" ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
ಭೂಪಾಲ್, ಇಂದೋರ್, ವಿದಿಶಾ ಕ್ಷೇತ್ರಗಳನ್ನು ಕಾಂಗ್ರೆಸ್ ಕಳೆದ ಮೂರು ದಶಕಗಳಿಂದಲೂ ಗೆದ್ದಿಲ್ಲ. ಈಗ ದಿಗ್ವಿಜಯ್ ಸಿಂಗ್ ರಾಜ್ ಗಡ್ ಕ್ಷೇತ್ರದಿಂದ ಸ್ಪರ್ಧಿಸಲು ಎದುರು ನೋಡುತ್ತಿದ್ದಾರೆ ಎನ್ನಲಾಗಿದೆ.