ಮಿಜೋರಾಂನಲ್ಲಿ ಭಾನುವಾರದಿಂದ ನಾಲ್ಕನೇ ಬಾರಿಗೆ ನಡುಗಿದ ಭೂಮಿ
ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ (ಎನ್‌ಸಿಎಸ್) ಪ್ರಕಾರ ಕೇಂದ್ರಬಿಂದುವು ಚಾಂಫೈನ 31 ಕಿ.ಮೀ ನೈಋತ್ಯ (ಎಸ್ಎಸ್ಡಬ್ಲ್ಯು) ಆಗಿತ್ತು.
ನವದೆಹಲಿ: ರಿಕ್ಟರ್ ಮಾಪಕದಲ್ಲಿ 4.1 ತೀವ್ರತೆಯ ಭೂಕಂಪನವು ಬುಧವಾರ ಬೆಳಿಗ್ಗೆ 08:02ಕ್ಕೆ ಮಿಜೋರಾಂ (Mizoram) ಅನ್ನು ನಡುಗಿಸಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ (ಎನ್‌ಸಿಎಸ್) ಪ್ರಕಾರ ಚಾಂಫೈನ 31 ಕಿ.ಮೀ ನೈಋತ್ಯ ಭೂಕಂಪ ಕೇಂದ್ರಬಿಂದು ಆಗಿದೆ.
ಭಾನುವಾರ ಮಧ್ಯಾಹ್ನ (ಸಂಜೆ 4.16 ಕ್ಕೆ) ರಿಕ್ಟರ್ ಮಾಪಕದಲ್ಲಿ 5.1 ರಷ್ಟು ಭೂಕಂಪನವನ್ನು ಅನುಭವಿಸಿದ್ದ ಮಿಜೋರಾಂನಲ್ಲಿ ಸೋಮವಾರ ರಿಕ್ಟರ್ ಮಾಪಕದಲ್ಲಿ 5.5 ರಷ್ಟಿರುವ ಮಧ್ಯಮ ಭೂಕಂಪದ ಅನುಭವವಾಗಿದೆ. ಈ ಭೂಕಂಪ ಪೂರ್ವ ಮಿಜೋರಾಂನ ಚಂಪೈ ಪ್ರದೇಶ ಮತ್ತು ಮ್ಯಾನ್ಮಾರ್‌ನ ಗಡಿಯಲ್ಲಿರುವ ಇತರ ಪಕ್ಕದ ಈಶಾನ್ಯ ರಾಜ್ಯಗಳನ್ನು ಬೆಚ್ಚಿಬೀಳಿಸಿದ್ದು ಹಲವು ಕಟ್ಟಡಗಳಿಗೆ ಹಾನಿಯಾಗಿದೆ.
ಇದಲ್ಲದೆ ನಿನ್ನೆ ರಾತ್ರಿ 7.17 ಕ್ಕೆ ದಕ್ಷಿಣ ಮಿಜೋರಾಂನ ಲುಂಗ್ಲೆ ಜಿಲ್ಲೆಗೆ ರಿಕ್ಟರ್ ಮಾಪಕದಲ್ಲಿ 3.7 ರಷ್ಟಿರುವ ಭೂಕಂಪ (Earthquake) ಸಂಭವಿಸಿದೆ. 25 ಕಿ.ಮೀ ಆಳದಲ್ಲಿ ಮತ್ತು ಕೆಲವು ಸೆಕೆಂಡುಗಳ ಕಾಲ ಈ ಭೂಮಿ ನಡುಗಿರುವುದಾಗಿ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.
ಈಶಾನ್ಯ ರಾಜ್ಯ ಮಿಜೋರಾಂ ಭಾನುವಾರದಿಂದ ನಾಲ್ಕು ಭೂಕಂಪಗಳಿಗೆ ಸಾಕ್ಷಿಯಾಗಿದೆ.
ಏತನ್ಮಧ್ಯೆ ಭೂಕಂಪಶಾಸ್ತ್ರಜ್ಞರು ಪರ್ವತ ಈಶಾನ್ಯ ಪ್ರದೇಶವನ್ನು ವಿಶ್ವದ ಆರನೇ ಪ್ರಮುಖ ಭೂಕಂಪ ಪೀಡಿತ ಪಟ್ಟಿಯೆಂದು ಪರಿಗಣಿಸಿದ್ದಾರೆ. 1897ರಲ್ಲಿ ಶಿಲ್ಲಾಂಗ್ ಪ್ರದೇಶದಲ್ಲಿ ರಿಕ್ಟರ್ ಮಾಪಕದಲ್ಲಿ 8.2 ರಷ್ಟಿರುವ ಭೂಕಂಪ ಅಪ್ಪಳಿಸಿತು. 1950 ರಲ್ಲಿ ರಿಕ್ಟರ್ ಮಾಪಕದಲ್ಲಿ 8.7 ರಷ್ಟಿರುವ ಭೂಕಂಪನವು ಬ್ರಹ್ಮಪುತ್ರ ನದಿಯ ಹಾದಿಯನ್ನೇ ಬದಲಿಸಿತು.
ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಡೊನೆರ್ (ಈಶಾನ್ಯ ಪ್ರದೇಶದ ಅಭಿವೃದ್ಧಿ) ಸಚಿವ ಜಿತೇಂದ್ರ ಸಿಂಗ್ ಅವರು ಮಿಜೋರಾಂ ಮುಖ್ಯಮಂತ್ರಿ ಜೋರಮ್‌ಥಂಗಾ ಅವರೊಂದಿಗೆ ಮಾತನಾಡಿದರು ಮತ್ತು ಕೇಂದ್ರದಿಂದ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.