ಗಾಂಧಿ ಕುಟುಂಬದ ಅಧಿಕಾರ ದಾಹಕ್ಕೆ ದೇಶ ಸೆರೆಮನೆ ಆಯಿತು: ಪ್ರಧಾನಿ ಮೋದಿ
ಒಂದು ಕುಟುಂಬದ ಅಧಿಕಾರ ದಾಹಕ್ಕೆ, ಗುಲಾಮಗಿರಿಗೆ ಇಡೀ ದೇಶವನ್ನೇ ಸೆರೆಮನೆ ಮಾಡಲಾಗುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ : ಮೋದಿ
ಮುಂಬೈ: ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುವಂತೆ 1975ರಲ್ಲಿ ರಾಷ್ಟ್ರದಲ್ಲಿ ತುರ್ತುಪರಿಸ್ಥಿತಿ ಹೇರಿದ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ದೇಶದ ಯುವಜನತೆ ಅಂದು ಏನಾಯಿತು ಎಂಬುದರ ಬಗ್ಗೆ ಅರಿಯಬೇಕಿದೆ ಎಂದರು.
ಮುಂಬೈಯ ಬಿರ್ಲಾ ಮಾತುಶ್ರಿ ಆಡಿಟೋರಿಯಂನಲ್ಲಿ ತುರ್ತು ಪರಿಸ್ಥಿತಿಯ 43 ನೇ ವಾರ್ಷಿಕೋತ್ಸವದ ಸ್ಮರಣಾರ್ಥವಾಗಿ ಏರ್ಪಡಿಸಿದ್ದ 'ಡಾರ್ಕ್ ಡೇಸ್ ಆಫ್ ಎಮರ್ಜೆನ್ಸಿ' ಎಂಬ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ಮೋದಿ, "ಒಂದು ಕುಟುಂಬದ ಅಧಿಕಾರ ದಾಹಕ್ಕೆ, ಗುಲಾಮಗಿರಿಗೆ ಇಡೀ ದೇಶವನ್ನೇ ಸೆರೆಮನೆ ಮಾಡಲಾಗುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಪ್ರತಿ ಮನುಷ್ಯನೂ ಭಯದಲ್ಲೇ ಬದುಕುತ್ತಿದ್ದ. ಸಂವಿಧಾನವನ್ನು ದುರ್ಬಳಕೆ ಮಾಡಿಕೊಳ್ಳಲಾಗಿತ್ತು" ಎಂದು ತುರ್ತು ಪರಿಸ್ಥಿತಿಯ ದಿನಗಳನ್ನು ನೆನಪಿಸಿಕೊಂಡರು.
ತುರ್ತುಪರಿಸ್ಥಿತಿಯ ದಿನಗಳನ್ನು ಮರಳಿ ತರಲು ಪ್ರತಿಪಕ್ಷಗಳ ಪ್ರಯತ್ನದ ಬಗ್ಗೆ ಮಾತನಾಡಿದ ಅವರು, ಬಿಜೆಪಿಯ ಉದ್ದೇಶ ಕಾಂಗ್ರೆಸ್ ಪಕ್ಷದ ಮೇಲೆ ದಾಳಿ ಮಾಡುವುದಲ್ಲ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸಂಭವಿಸಿದ ಎಲ್ಲವನ್ನೂ ಈ ದೇಶದ ಯುವಜನತೆಗೆ ತಿಳಿಯುವಂತೆ ಮಾಡಬೇಕು ಎಂಬುದೇ ಈ ಕಾರ್ಯಕ್ರಮದ ಉದ್ದೇಶ ಎಂದು ಮೋದಿ ಹೇಳಿದರು.
"ಯಾವಾಗ ಗಾಂಧೀ ಕುಟುಂಬಕ್ಕೆ ಅಧಿಕಾರದಿಂದ ಕೆಳಗಿಳಿಯುವ ಆತಂಕ ಎದುರಾಯಿತೋ, ಆಗ ದೇಶದಲ್ಲಿ ಭಯದ ವಾತಾವರಣ ಇದೆ. ರಾಜಕೀಯ ಪರಿಸ್ಥಿತಿ ಹದಗೆಟ್ಟಿದೆ ಎಂಬ ಕಾರಣ ನೀಡಿ ತುರ್ತು ಪರಿಸ್ಥಿತಿ ಹೇರಲಾಯಿತು. ಆಂತರಿಕ ಪ್ರಜಾಪ್ರಭುತ್ವವನ್ನು ಹೊಂದಿರದ ಕಾಂಗ್ರೆಸ್ ಪಕ್ಷ ಪ್ರಜಾಪ್ರಭುತ್ವದ ಆದರ್ಶಗಳಿಗೆ ಬದ್ಧವಾಗಿರುತ್ತದೆ ಎಂಬ ನಿರೀಕ್ಷೆಯಿಲ್ಲ" ಎಂದು ಅವರು ಹೇಳಿದರು.
ಮುಂದುವರೆದು ಮಾತನಾಡಿದ ಅವರು, ಯಾರು ಪ್ರಜಾಪ್ರಭುತ್ವವನ್ನು ನಿರಾಕರಿಸುತ್ತಾರೋ, ಅವರಿಗೆ ಎಂದಿಗೂ ಸಂವಿಧಾನದ ಜವಾಬ್ದಾರಿ ನೀಡಬಾರದು ಎಂದು ಮೋದಿ ಜನತೆಯನ್ನು ಎಚ್ಚರಿಸಿದರು.