ನವದೆಹಲಿ: ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿಯುವ ಚಂದ್ರಯಾನ್ -2 ಮಿಷನ್ ಜಾಗತಿಕವಾಗಿ ಇತಿಹಾಸ ಸೃಷ್ಟಿಸಿದೆ. ಆದರೆ, ಚಂದ್ರನ ದಕ್ಷಿಣ ಧ್ರುವದ ಮೇಲೆ ಲ್ಯಾಂಡ್ ಆಗುವ ಕೊನೆ ಕ್ಷಣದಲ್ಲಿ ಆರ್ಬಿಟರ್ ನಿಂದ  ವಿಕ್ರಮ್ ಲ್ಯಾಂಡರ್ ಸಂಪರ್ಕ ಕಳೆದುಕೊಂಡಿದ್ದು, ವಿಜ್ಞಾನಿಗಳಲ್ಲಿ ಆತಂಕದೊಂದಿಗೆ ನಿರಾಸೆಯನ್ನೂ ಮೂಡಿಸಿದೆ. ಈ ಬಗ್ಗೆ ರಾಜ್ಯಸಭಾ ಸಂಸದ ಡಾ.ಸುಭಾಷ್ ಚಂದ್ರ ಟ್ವೀಟ್ ಮಾಡಿದ್ದು, ಇಡೀ ದೇಶವೇ ಇಸ್ರೋದ ಈ ಪ್ರಯತ್ನದ ಬಗ್ಗೆ ಹೆಮ್ಮೆಪಡುತ್ತದೆ ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಪ್ರಯತ್ನವನ್ನು ಶ್ಲಾಘಿಸಿರುವ ಅವರು, "ನೆಚ್ಚಿನ ಇಸ್ರೋ ತಂಡ, ನೀವು ಮಾಡಿದ ಅಪಾರ ಪ್ರಯತ್ನದ ಬಗ್ಗೆ ರಾಷ್ಟ್ರ ಹೆಮ್ಮೆಪಡುತ್ತದೆ. ಪ್ರತಿಯೊಬ್ಬ ಭಾರತೀಯನೂ ನಿಮ್ಮ ಭಾವನೆಗಳನ್ನು ಅನುಭವಿಸುತ್ತಾನೆ. ನಿಮ್ಮ ಅದ್ಭುತ ಕೆಲಸವನ್ನು ಮುಂದುವರೆಸಿ. ಇಡೀ ದೇಶವು ಇಸ್ರೋ ಪ್ರಯತ್ನದ ಬಗ್ಗೆ ಹೆಮ್ಮೆಪಡುತ್ತದೆ. ಜೈ ಹಿಂದ್" ಎಂದು ಟ್ವೀಟ್ ಮಾಡಿದ್ದಾರೆ.



ಸುಮಾರು 48 ದಿನಗಳ ಸುದೀರ್ಘ ಪ್ರಯಾಣದ ಬಳಿಕ ಶುಕ್ರವಾರ ತಡರಾತ್ರಿ 27 ಕಿ.ಗ್ರಾಂ ತೂಕದ ಪ್ರಗ್ಯಾನ್ ರೋವರ್ ಅವನ್ನು ಇರಿಸಿಕೊಂಡಿದ್ದ 1471 ಕಿ.ಗ್ರಾಂ ತೂಕದ 'ವಿಕ್ರಮ್ ಲ್ಯಾಂಡರ್' ಚಂದ್ರನ ದಕ್ಷಿಣ ಧ್ರುವದ ಮೇಲೆ ಯಶಸ್ವಿಯಾಗಿ ಇಳಿಯುವ ಕೊನೆ ಕ್ಷಣದಲ್ಲಿ ನಿಯಂತ್ರಣ ಕೇಂದ್ರದಿಂದ ಸಂಪರ್ಕ ಕಳೆದುಕೊಂಡಿದೆ. ಚಂದ್ರನ ನೆಲಕ್ಕೆ ಇಳಿಯುವ 2.1 ಕಿಲೋ ಮೀಟರ್ ವರೆಗೂ ಸಂಪರ್ಕದಲ್ಲಿದ್ದ ವಿಕ್ರಮ್, ಬಳಿಕ ಸಂಪರ್ಕ ಕಳೆದುಕೊಂಡಿದೆ. ಸದ್ಯ ವಿಜ್ಞಾನಿಗಳು ಕೊನೆ ಕ್ಷಣದ ದತ್ತಾಂಶಗಳನ್ನು ಸಂಗ್ರಹಿಸುತ್ತಿದ್ದಾರೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ತಿಳಿಸಿದ್ದಾರೆ.