`100% ಅಪರಾಧ ಮುಕ್ತ ಸಮಾಜದ ಗ್ಯಾರಂಟಿ ಶ್ರೀರಾಮನಿಂದ ಕೂಡ ಅಸಾಧ್ಯ`
`ಶ್ರೀರಾಮನಿಂದ ಕೂಡ ಶೇ.100ರಷ್ಟು ಅಪರಾಧ ಮುಕ್ತ ಸಮಾಜ ಖಾತರಿಪಡಿಸುವುದು ಸಾಧ್ಯವಿಲ್ಲ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ` ಯುಪಿ ಮಂತ್ರಿಯಿಂದ ವಿವಾದಾತ್ಮಕ ಟಿಪ್ಪಣಿ.
ಲಖನೌ: ಉನ್ನಾವೋದಲ್ಲಿ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯನ್ನು ಸಜೀವ ದಹಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ಐದು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇದೇ ವೇಳೆ ಪ್ರಕರಣದಲ್ಲಿ ತೀವ್ರವಾಗಿ ಗಾಯಗೊಂಡ ಸಂತ್ರಸ್ತೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಲಖನೌನಿಂದ ಏರ್ ಲಿಫ್ಟ್ ಮೂಲಕ ಸಾಗಿಸಿ ದೆಹಲಿಗೆ ಕರೆತರಲಾಗುತ್ತಿದೆ.
ಏತನ್ಮಧ್ಯೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿ ಮಂತ್ರಿಯಾಗಿರುವ ರಣವೆಂದ್ರ ಪ್ರತಾಪ್ ಸಿಂಗ್ ಘಟನೆಗೆ ಸಂಬಂಧಿಸಿದಂತೆ ಅಸಂಬದ್ಧ ಹೇಳಿಕೆಯೊಂದನ್ನು ನೀಡಿದ್ದಾರೆ. ಈ ಕುರಿತು ANI ಸುದ್ದಿ ಸಂಸ್ಥೆ ತನ್ನ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ವಿಡಿಯೋವೊಂದನ್ನು ಪ್ರಕಟಿಸಿದೆ.
ವಿಡಿಯೋದಲ್ಲಿ ಸಚಿವರಿಗೆ ಪ್ರತಿನಿತ್ಯ ನಡೆಯುತ್ತಿರುವ ರೇಪ್ ಪ್ರಕರಣಗಳ ಕುರಿತಾಗಿ ಪ್ರಶ್ನಿಸಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವ ರಣವೆಂದ್ರ ಪ್ರತಾಪ್ ಸಿಂಗ್ "ಉನ್ನಾವೊ ಘಟನೆಗೆ ಸಂಬಂಧಿಸಿದಂತೆ, ಶ್ರೀರಾಮನಿಂದ ಕೂಡ ಶೇ.100ರಷ್ಟು ಅಪರಾಧ ಮುಕ್ತ ಸಮಾಜ ಖಾತರಿಪಡಿಸುವುದು ಸಾಧ್ಯವಿಲ್ಲ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ಆದಾಗ್ಯೂ, ಅಪರಾಧ ಎಸಗಿದರೆ, ಅಪರಾಧಿ ಜೈಲಿಗೆ ಹೋಗುವುದು ಖಚಿತ" ಎಂದಿದ್ದಾರೆ.