ನವದೆಹಲಿ: ಕೇರಳದ ಪ್ರಸಿದ್ಧ ಕಿರುತೆರೆ ನಟಿ ಸೂರ್ಯ ಶಿಶಕುಮಾರ್ ಅವರನ್ನು ತಾಯಿ ಮತ್ತು ಸಹೋದರಿ ಜೊತೆಗೂಡಿ ನಕಲಿ ನೋಟುಗಳನ್ನು ಮುದ್ರಿಸುತ್ತಿದ್ದ ಆರೋಪದಡಿ ಬಂಧಿಸಲಾಗಿದೆ. ಮೂಲಗಳ ಪ್ರಕಾರ, ಸಾಲ ತೀರಿಸಲು ನಟಿ ತನ್ನ ಮನೆಯಲ್ಲಿ ಒಂದು ನಕಲಿ ನೋಟು ಮುದ್ರಣದಲ್ಲಿ ತೊಡಗಿದ್ದರು ಎನ್ನಲಾಗಿದೆ.


COMMERCIAL BREAK
SCROLL TO CONTINUE READING

500 ರೂ. ಮುಖಬೆಲೆಯ ನಕಲಿ ನೋಟು
500 ರೂ. ಮುಖಬೆಲೆಯ ನಕಲಿ ನೋಟುಗಳನ್ನು ಮನೆಯಲ್ಲಿ ಮುದ್ರಿಸಲಾಗುತ್ತಿತ್ತು ಎಂದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಪೊಲೀಸರ ಹಿರಿಯ ಅಧಿಕಾರಿಗಳ ಅಂದಾಜಿನ ಪ್ರಕಾರ, ಸುಮಾರು 8 ಲಕ್ಷ ನಕಲಿ ನೋಟುಗಳನ್ನು ಕಳೆದ 8 ತಿಂಗಳಲ್ಲಿ ಮುದ್ರಿಸಲಾಗಿದೆ. ಕೇರಳದ ಇಡುಕ್ಕಿ ಜಿಲ್ಲೆಯ ಕಟ್ಟಪಾಣದಲ್ಲಿ ತನ್ನ ಮನೆಯಲ್ಲಿ ನಕಲಿ ನೋಟುಗಳನ್ನು ಮುದ್ರಿಸಲು ಸೂರ್ಯ ಶಶಿಕುಮಾರ್ ಅವರ ತಾಯಿ ಮತ್ತು ಸಹೋದರಿಯೊಂದಿಗೆ ಕೆಲಸ ಮಾಡಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ. ಮನೆಯ ಎರಡನೆಯ ಮಹಡಿಯಲ್ಲಿ ನಕಲಿ ನೋಟುಗಳ ಮುದ್ರಣವನ್ನು ಮಾಡಲಾಗಿದೆ ಎಂದು ತಿಳಿಸಿರುವ ಪೊಲೀಸರು, ನೋಟು ಮುದ್ರಣ ಕಾರ್ಯದಲ್ಲಿ ಇವರೊಂದಿಗೆ ಇತರರು ಸೇರಿರಬಹುದೆಂದು ಶಂಕಿಸಿದ್ದಾರೆ.


ನಕಲಿ ನೋಟು ಮುದ್ರಣದಲ್ಲಿ ನಟಿಯ ತಾಯಿ ಮುಖ್ಯಪಾತ್ರ ವಹಿಸಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ನಕಲಿ ನೋಟು ಮುದ್ರಣಕ್ಕಾಗಿ ಸಲಕರಣೆಗಳನ್ನು ಕೊಳ್ಳಲು ಕುಟುಂಬವು 4.36 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದೆ. ನಟಿಯ ಮನೆ ಮೇಲೆ ದಾಳಿ ನಡೆಸಿದ ಪೊಲೀಸರು 2.25 ಲಕ್ಷ ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. 


ನಕಲಿ ನೋಟಿಗೆ ಸಂಬಂಧಿಸಿದಂತೆ ಕೆಲ ದಿನಗಳ ಹಿಂದೆ ಮೂರು ಜನರನ್ನು ಪೊಲೀಸರು ಬಂಧಿಸಿದ್ದರು. ಅವರನ್ನು ವಿಚಾರಣೆ ನಡೆಸುವಾಗ ನಟಿ ಸೂರ್ಯ ಶಶಿಕುಮಾರ್ ಹೆಸರು ಹೊರಬಿದ್ದಿದೆ. ಮಾಹಿತಿ ಪಡೆದು ನಟಿಯ ಮನೆಯ ಮೇಲೆ ದಾಳಿ ನಡೆಸಿದ ಪೊಲೀಸರು ನಟಿ ಸೂರ್ಯ ಶಶಿಕುಮಾರ್, ಆಕೆಯ ತಾಯಿ ಮತ್ತು ಸಹೋದರಿಯನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.