ನವದೆಹಲಿ: ರೈತರ ಕಲ್ಯಾಣ ಮತ್ತು ಅಭಿವೃದ್ಧಿಯು ಮಹಾರಾಷ್ಟ್ರದ ಉದ್ಧವ್ ಠಾಕ್ರೆ ನೇತೃತ್ವದ ಸಮ್ಮಿಶ್ರ ಸರ್ಕಾರದ ಪ್ರಮುಖ ಆದ್ಯತೆಗಳಾಗಿವೆ ಎಂದು ಶಿವಸೇನೆ-ಕಾಂಗ್ರೆಸ್-ಎನ್‌ಸಿಪಿ ಮೈತ್ರಿಕೂಟದ ಮುಖಂಡರು ಇಂದು ಮುಂಬೈನಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.


COMMERCIAL BREAK
SCROLL TO CONTINUE READING

ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಬುಲೆಟ್ ರೈಲು ಯೋಜನೆಗೆ ಹಿನ್ನಡೆಯಾಗಿದೆ. ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಿವಸೇನೆ-ಕಾಂಗ್ರೆಸ್-ಎನ್‌ಸಿಪಿ ಮೈತ್ರಿಕೂಟದ ಮುಖಂಡರು 'ಸಚಿವ ಸಂಪುಟ ಮೊದಲು ರೈತರಿಗೆ ಕೇಂದ್ರೀಕರಿಸುತ್ತದೆ. ಅದರಲ್ಲೂ ವಿಶೇಷವಾಗಿ ಕೃಷಿ, ಬರಪೀಡಿತ ಪ್ರದೇಶ ಮತ್ತು ಬಾಕಿ ಇರುವ ಸಾಲಗಳ ಬಗ್ಗೆ ಕಾರ್ಯಸೂಚಿಯನ್ನು ನಿಗದಿಪಡಿಸಲಾಗುವುದು ಎಂದು ಶಿವಸೇನೆ ಮುಖಂಡ ಏಕ್ನಾಥ್ ಶಿಂಧೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಇದೆ ವೇಳೆ ಎನ್‌ಸಿಪಿಯ ಜಯಂತ್ ಪಾಟೀಲ್ ಮತ್ತು ನವಾಬ್ ಮಲಿಕ್ ಕೂಡ ಉಪಸ್ಥಿತರಿದ್ದರು.


ಜನರ ಹಿತ ದೃಷ್ಟಿಯಿಂದ ಸಂಪುಟ ಸಭೆಯಲ್ಲಿ ಬುಲೆಟ್ ರೈಲು ಮತ್ತು ನಾನಾರ್ ರಿಫೈನರಿ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ.ಜೊತೆಗೆ ರಾಜ್ಯದಲ್ಲಿ ಹೂಡಿಕೆ, ಶಿಕ್ಷಣ ಮತ್ತು ವ್ಯವಹಾರದ ಸನ್ನಿವೇಶಗಳನ್ನು ಸುಧಾರಿಸುವ ಅಗತ್ಯತೆಯ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಶಿವಸೇನೆ ಮುಖಂಡ ಏಕ್ನಾಥ್ ಶಿಂಧೆ ತಿಳಿಸಿದರು. ಇದೇ ವೇಳೆ ಮೈತ್ರಿಕೂಟದ ನಾಯಕರು ಪತ್ರಿಕಾಗೋಷ್ಠಿಯಲ್ಲಿ ಜಾತ್ಯತೀತತೆಯ ಬಗ್ಗೆ ತಮ್ಮ ಜಂಟಿ ದೃಷ್ಟಿಕೋನದ ಬಗ್ಗೆ ಸ್ಪಷ್ಟಪಡಿಸಿದರು.


ಈಗ ಆಡಳಿತ ಮೈತ್ರಿಕೂಟದ ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಆಧ್ಯತೆ ಪಟ್ಟಿಯಲ್ಲಿ ಬರ ಪೀಡಿತ ಪ್ರದೇಶಗಳಿಗೆ ನೀರು ಸರಬರಾಜು ಮಾಡುವುದನ್ನು ಖಾತ್ರಿಪಡಿಸುವುದು, ರಾಜ್ಯ ಸರ್ಕಾರದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದು; ಕೈಗೆಟುಕುವ ಆರೋಗ್ಯ ರಕ್ಷಣೆ, ವಿಮಾ ರಕ್ಷಣೆಯನ್ನು ಸ್ಥಾಪಿಸುವುದು; ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಜನಾಂಗಕ್ಕೆ ಸಂಬಂಧಿಸಿದ ಪ್ರಕರಣಗಳ ತ್ವರಿತ ಪರಿಹಾರ; ಮಹಿಳೆಯರ ಸುರಕ್ಷತೆ; ಶಿಕ್ಷಣದ ಗುಣಮಟ್ಟದ ಸುಧಾರಣೆ; ಮತ್ತು ಸುಲಭವಾದ ಪ್ರಯಾಣ ಮತ್ತು ಸಾರಿಗೆಯನ್ನು ಖಚಿತಪಡಿಸಿಕೊಳ್ಳಲು ರಸ್ತೆ ಸಂಪರ್ಕದ ವರ್ಧನೆಗೆ ಹೆಚ್ಚಿನ ಆಧ್ಯತೆ ನೀಡಲಾಗುವುದು ಎಂದು ಹೇಳಿದರು.


ಈ ಹಿಂದೆ ಮಹಾರಾಷ್ಟ್ರಕ್ಕೆ 1.08 ಲಕ್ಷ ಕೋಟಿ ರೂ.ಗಳ ಬುಲೆಟ್ ರೈಲು ಯೋಜನೆ ಅಗತ್ಯವಿಲ್ಲ ಎಂದು ಮೈತ್ರಿ ನಾಯಕರು ಸೂಚಿಸಿದ್ದರು ಮತ್ತು ಮುಂಬೈ ಮೆಟ್ರೊಗೆ ಯಾವುದೇ ಮರಗಳನ್ನು ಕಡಿಯುವುದನ್ನು ಸಹ ನಿರಾಕರಿಸಿದ್ದರು.