ಮುಂಬೈ: ಗರ್ಭಿಣಿ ಮಗಳನ್ನು ಕೊಂದ ತಂದೆ ಬಂಧನ
24 ಗಂಟೆಗಳ ಒಳಗೆ ಆರೋಪಿಯನ್ನು ಬಂಧಿಸಿದ ಪೊಲೀಸರು.
ಮುಂಬೈ: ಭಾನುವಾರ ರಾತ್ರಿ ಇಲ್ಲಿನ ಘಾಟ್‌ಕೋಪರ್‌ನಲ್ಲಿ ಹತ್ಯೆಗೀಡಾದ ಗರ್ಭಿಣಿ ಮಹಿಳೆ ಮೀನಾಕ್ಷಿ ಚೌರಾಸಿಯಾ ಅವರ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.
"ಭಾನುವಾರ ಬೆಳಿಗ್ಗೆ ಗರ್ಭಿಣಿ ಮೀನಾಕ್ಷಿ ಚೌರಾಸಿಯಾ ಅವರ ಹತ್ಯೆಯ ಬಗ್ಗೆ ನಮಗೆ ಮಾಹಿತಿ ಲಭಿಸಿತ್ತು. ಇದಾದ 24 ಗಂಟೆಗಳ ಒಳಗೆ ಮೀನಾಕ್ಷಿ ಚೌರಾಸಿಯಾ ಅವರ ತಂದೆ ಆರೋಪಿ ರಾಜ್‌ಕುಮಾರ್ ಚೌರಾಸಿಯಾ ಅವರನ್ನು ಬಂಧಿಸಲಾಯಿತು" ಎಂದು ಡಿಸಿಪಿ ಅಖಿಲೇಶ್ ಸಿಂಗ್ ತಿಳಿಸಿದ್ದಾರೆ.
"ಮೀನಾಕ್ಷಿ ಚೌರಾಸಿಯಾ ಸಾವಿನ ಬಗ್ಗೆ ಆಕೆಯ ಪತಿ ಬ್ರಿಜೇಶ್ ಚೌರಾಸಿಯಾ ಮತ್ತು ಕುಟುಂಬದ ಇತರ ಸದಸ್ಯರನ್ನು ಸಹ ವಿಚಾರಣೆಗೆ ಒಳಪಡಿಸಲಾಗಿದೆ. ತನಿಖೆಯಲ್ಲಿ ಮೀನಾಕ್ಷಿ ಚೌರಾಸಿಯಾ ಅವರ ತಂದೆ ರಾಜ್‌ಕುಮಾರ್ ಚೌರಾಸಿಯಾ ಅವರೇ ಕೊಲೆ ಮಾಡಿದ್ದಾರೆ ಎಂಬುದು ಸಾಬೀತಾಗಿದೆ" ಎಂದು ಡಿಸಿಪಿ ಮಾಹಿತಿ ನೀಡಿದರು.
ತಂದೆ ರಾಜ್‌ಕುಮಾರ್ ಚೌರಾಸಿಯಾ ಮತ್ತು ಅವನ ಗರ್ಭಿಣಿ ಮಗಳಾದ ಮೀನಾಕ್ಷಿ ಚೌರಾಸಿಯಾ ನಡುವೆ ಭಿನ್ನಾಭಿಪ್ರಾಯ ಮೂಡಿದ್ದ ಹಿನ್ನೆಲೆಯಲ್ಲಿ, ರಾಜ್‌ಕುಮಾರ್ ಮಗಳನ್ನೇ ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ.
"ಮೀನಾಕ್ಷಿ ತನ್ನ ತಂದೆಯ ಅನುಮತಿಯಿಲ್ಲದೆ ಮದುವೆಯಾಗಿದ್ದರು. ಇದೇ ಆಕೆಯ ಹತ್ಯೆಗೆ ಪ್ರಮುಖ ಕಾರಣ ಎಂದು ತನಿಖೆಯಿಂದ ತಿಳಿದುಬಂದಿದೆ" ಎಂದು ಡಿಸಿಪಿ ಹೇಳಿದರು.
ರಾಜ್‌ಕುಮಾರ್ ಮಗಳೊಂದಿಗಿನ ಭಿನ್ನಾಭಿಪ್ರಾಯವನ್ನು ಸರಿಪಡಿಸಿಕೊಳ್ಳುವ ನೆಪದಲ್ಲಿ ಮೀನಾಕ್ಷಿಗೆ ಕರೆ ಮಾಡಿದ್ದರು. ಆ ಸಂದರ್ಭದಲ್ಲಿ "ಘಾಟ್ಕೋಪರ್ನ ನಾರಾಯಣ್ ನಗರ ಬಸ್ ನಿಲ್ದಾಣಕ್ಕೆ ಬರುವಂತೆ ಮೀನಾಕ್ಷಿಗೆ ತಿಳಿಸಿದ್ದರು. ತಂದೆಯೊಂದಿಗಿನ ಮುನಿಸನ್ನು ಕೊನೆಗೊಳಿಸಿಕೊಳ್ಳಲು ಬಂದಿದ್ದ ವೇಳೆ ಆತ ಮಗಳನ್ನು ಕೊಲೆ ಮಾಡಿದರು" ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಪ್ರಶ್ನಿಸಿದಾಗ, ರಾಜ್‌ಕುಮಾರ್ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಸಿಂಗ್ ಸುದ್ದಿ ಸಂಸ್ಥೆ ಎಎನ್ಐಗೆ ಹೇಳಿದರು.