Lockdown: ಕಾಲ್ನಡಿಗೆಯಲ್ಲಿ ಸೂರತ್‌ನಿಂದ ಬಾಂಡಾ ತಲುಪಿದ ಗರ್ಭಿಣಿ ಮಹಿಳೆ
ಕರೋನಾ ವೈರಸ್‌ನಿಂದಾಗಿ ಮಾರ್ಚ್ 24 (ಮಂಗಳವಾರ) ಮಧ್ಯರಾತ್ರಿಯಿಂದ ದೇಶಾದ್ಯಂತ ಲಾಕ್‌ಡೌನ್ ಘೋಷಿಸಿದ ನಂತರ, ಕಾರ್ಖಾನೆಯ ಮಾಲೀಕರು ಕಾರ್ಮಿಕರಿಗೆ ಯಾವುದೇ ಸಂಬಳ ನೀಡದೆ ಕೆಲಸದಿಂದ ತೆಗೆದುಹಾಕಿದ್ದಾರೆ ಎಂದು ಮಹಿಳೆ ದೂರಿದ್ದಾರೆ.
ಬಾಂಡಾ : ಕೊರೊನಾವೈರಸ್ ಕಾರಣದಿಂದಾಗಿ, ದೇಶಾದ್ಯಂತ ಜಾರಿಗೆ ತರಲಾಗಿರುವ ಲಾಕ್‌ಡೌನ್ (Lockdown)ನಿಂದಾಗಿ ಬಡ ಕಾರ್ಮಿಕರು ಪರದಾಡುವಂತಾಗಿದೆ. ಕಳೆದ ವಾರವಷ್ಟೇ ದೆಹಲಿಯಿಂದ ಸಾವಿರಾರು ವಲಸಿಗರು ಉತ್ತರಪ್ರದೇಶಕ್ಕೆ ಕಾಲ್ನಡಿಗೆಯಲ್ಲಿ ಸಾಗುತ್ತಿರುವ ದೃಶ್ಯಗಳು ಕಂಡು ಬಂದಿದ್ದವು. ಇದೀಗ ಏಳು ತಿಂಗಳ ಗರ್ಭಿಣಿ ಮಹಿಳೆ ತನ್ನ ಎರಡು ವರ್ಷದ ಮಗುವಿನೊಂದಿಗೆ ಕಾಲ್ನಡಿಗೆಯಲ್ಲಿ ನೂರಾರು ಕಿಲೋಮೀಟರ್ ಪ್ರಯಾಣಿಸಿರುವ ಬಗ್ಗೆ ವರದಿಯಾಗಿದೆ.
ವಾಸ್ತವವಾಗಿ ಗುಜರಾತ್‌ನ ಸೂರತ್‌ನಲ್ಲಿ ಕೆಲಸ ಮಾಡುತ್ತಿರುವ ಏಳು ತಿಂಗಳ ಗರ್ಭಿಣಿ ಮಹಿಳೆ ಕಾಲ್ನಡಿಗೆಯಲ್ಲಿ ನೂರಾರು ಕಿಲೋಮೀಟರ್ ಪ್ರಯಾಣಿಸಿ ಬಾಂಡಾ ಜಿಲ್ಲೆಯ ತನ್ನ ಗ್ರಾಮವನ್ನು ತಲುಪಿದ್ದಾಳೆ. ಬಂಡಾದಿಂದ ಸೂರತ್‌ಗೆ ರಸ್ತೆ ದೂರ 1,066 ಕಿ.ಮೀ. ಮಹಿಳೆ ತನ್ನ ಪತಿಯೊಂದಿಗೆ ಗುಜರಾತ್‌ನ ಸೂರತ್‌ನಲ್ಲಿರುವ ಖಾಸಗಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಳು. ಈ ದಂಪತಿಗೆ ಎರಡು ವರ್ಷದ ಮಗು ಕೂಡ ಇದೆ.
ಕರೋನಾ ವೈರಸ್‌ನಿಂದಾಗಿ ಮಾರ್ಚ್ 24 (ಮಂಗಳವಾರ) ಮಧ್ಯರಾತ್ರಿಯಿಂದ ದೇಶಾದ್ಯಂತ ಲಾಕ್‌ಡೌನ್ ಘೋಷಿಸಿದ ನಂತರ, ಕಾರ್ಖಾನೆಯ ಮಾಲೀಕರು ಕಾರ್ಮಿಕರಿಗೆ ಯಾವುದೇ ಸಂಬಳ ನೀಡದೆ ಕೆಲಸದಿಂದ ತೆಗೆದುಹಾಕಿದ್ದಾರೆ ಎಂದು ಬಾಂಡಾ ಜಿಲ್ಲೆಯ ಕಾಮಸಿನ್ ಪೊಲೀಸ್ ಠಾಣೆ ವ್ಯಾಪ್ತಿಗೆ ಒಳಪಡುವ ಭದವಲ್ ಗ್ರಾಮದ ಮಹಿಳೆ ದೂರಿದ್ದಾರೆ. ಕಾರ್ಖಾನೆ ಮಾಲೀಕರು ಸಂಬಳ ನೀಡದ ಕಾರಣ ಪರ್ಯಾಯ ಮಾರ್ಗವಿಲ್ಲದಿದೆ ನಾವು ಎರಡು ವರ್ಷದ ಮಗುವಿನೊಂದಿಗೆ ಕಾಲ್ನಡಿಗೆಯಲ್ಲಿ ನಮ್ಮ ಗ್ರಾಮ ತಲುಪಿದ್ದೇವೆ. ದೇವರನ್ನು ಹೊರತುಪಡಿಸಿ ಯಾರೂ ನಮ್ಮ ಸಹಾಯಕ್ಕೆ ಇರಲಿಲ್ಲ ಎಂದು ಮಹಿಳೆ ಅಳಲು ತೋಡಿಕೊಂಡಿದ್ದಾರೆ.
ಕಾಲ್ನಡಿಗೆಯಲ್ಲಿ ಬರುವ ದಾರಿಯಲ್ಲಿ ಸಾಕಷ್ಟು ಗ್ರಾಮಗಳು ಸಿಕ್ಕಳು ಅಲ್ಲಿ ಗ್ರಾಮಸ್ಥರು ಸ್ವಲ್ಪ ಕುಡಿಯಲು ನೀರು ಮತ್ತು ತಿನ್ನಲು ಸ್ವಲ್ಪ ಬೆಲ್ಲ ನೀಡುತ್ತಿದ್ದರು. "ನಾವು ಗುರುವಾರ ಮುಂಜಾನೆ ಸೂರತ್‌ನಿಂದ ಹೊರಟು ಮಂಗಳವಾರ ಬೆಳಿಗ್ಗೆ ಬಾಂಡಾ ತಲುಪಿದೆವು. ಈ ಪ್ರಯಾಣದ ಸಮಯದಲ್ಲಿ ನಾನು ಆಂಬ್ಯುಲೆನ್ಸ್‌ಗೆ ಹಲವಾರು ಬಾರಿ ಕರೆ ಮಾಡಿದ್ದೇನೆ, ಆದರೆ ಪ್ರಯೋಜನವಾಗಲಿಲ್ಲ" ಎಂದು ಮಹಿಳೆ ವ್ಯವಸ್ಥೆಯ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಬಾಂಡಾ ಜಿಲ್ಲಾ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ (ಸಿಎಮ್ಎಸ್) ಡಾ.ಸಂಪೂರ್ಣಾನಂದ್ ಮಿಶ್ರಾ ಮಾತನಾಡಿ, "ದಂಪತಿಗಳು ಮಂಗಳವಾರ ಬಾಂಡಾಗೆ ಬಂದಿ ಕೂಡಲೇ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅವರಿಗೆ ಪರೀಕ್ಷೆ ನಡೆಸಲಾಯಿತು. ಬಳಿಕ ಅವರನ್ನು ಆಂಬುಲೆನ್ಸ್‌ನಿಂದ ತಮ್ಮ ಗ್ರಾಮ ಭದವಲ್‌ಗೆ ಕಳುಹಿಸಲಾಗಿದೆ. 14 ದಿನದವರೆಗೂ ಅವರನ್ನು ಏಕಾಂತದಲ್ಲಿ ಉಳಿಯುವಂತೆ ಸಲಹೆ ನೀಡಲಾಗಿದೆ" ಎಂದು ತಿಳಿಸಿದರು.