ಜುಲೈ 31ರೊಳಗೆ ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡಲು ಸಾಧ್ಯವಿಲ್ಲವೇ? ಇಲ್ಲಿದೆ ಪರಿಹಾರ!
ನೀವು ಸ್ಥಳೀಯ ತೆರಿಗೆದಾರರಾಗಿದ್ದರೆ, ಹಿಂದೂ ಅವಿಭಜಿತ ಕುಟುಂಬ ಮತ್ತು ಅವರ ಖಾತೆಗೆ ಲೆಕ್ಕಪರಿಶೋಧನೆಯ ಅಗತ್ಯವಿಲ್ಲದಿದ್ದರೆ ಅಂತಹ ತೆರಿಗೆ ಪಾವತಿದಾರರಿಗೆ ರಿಟರ್ನ್ಸ್ ಫೈಲ್ ಮಾಡಲು ಜುಲೈ 31 ಕಡೆಯ ದಿನ.
ನವದೆಹಲಿ: 2018-19ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಸಲು ಕಡೇ ದಿನ ಯಾವುದು ಎಂದು ನಿಮಗೆ ತಿಳಿದಿದೆಯೇ? ನೀವು ಸ್ಥಳೀಯ ತೆರಿಗೆದಾರರಾಗಿದ್ದರೆ, ಹಿಂದೂ ಅವಿಭಜಿತ ಕುಟುಂಬ ಮತ್ತು ಅವರ ಖಾತೆಗೆ ಲೆಕ್ಕಪರಿಶೋಧನೆಯ ಅಗತ್ಯವಿಲ್ಲದಿದ್ದರೆ ಅಂತಹ ತೆರಿಗೆ ಪಾವತಿದಾರರಿಗೆ ರಿಟರ್ನ್ಸ್ ಫೈಲ್ ಮಾಡಲು ಜುಲೈ 31 ಕಡೆಯ ದಿನ. ಇದಲ್ಲದೆ, ಒಂದು ಕಂಪನಿಗೆ, ಲೆಕ್ಕಪರಿಶೋಧನೆಗೆ ಒಳಪಡಿಸಲಾಗುವ ಖಾತೆದಾರರು ಮತ್ತು ಕೆಲಸ ಮಾಡುವ ಪಾಲುದಾರ ಸಂಸ್ಥೆಗಳು ಸೆಪ್ಟೆಂಬರ್ 30ರೊಳಗೆ ರಿಟರ್ನ್ಸ್ ಸಲ್ಲಿಸಬಹುದು.
ಜುಲೈ 31ರೊಳಗೆ ಪಾವತಿಸಲು ಸಾಧ್ಯವಾಗದಿದ್ದರೆ...?
ಒಂದು ವೇಳೆ ನೀವು ನಿಗದಿತ ದಿನಾಂಕದೊಳಗೆ ಐಟಿ ರಿಟರ್ನ್ಸ್ ಸಲ್ಲಿಸಲು ಸಾಧ್ಯವಾಗದಿದ್ದಲ್ಲಿ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ನೀವು ಬಿಲೇಟೆಡ್(Belated ITR) ಐಟಿಆರ್ ಫೈಲ್ ಮಾಡಬಹುದು. ಆದರೆ ಇದಕ್ಕೆ ನೀವು ದಂಡ ಶುಲ್ಕ ಪಾವತಿಸಬೇಕಾಗುತ್ತದೆ. 2018-19ರ ಹಣಕಾಸು ವರ್ಷಕ್ಕೆ ದಂಡ ಶುಲ್ಕ ಸಹಿತ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು 31 ಮಾರ್ಚ್ 2020 ಕೊನೆಯ ದಿನವಾಗಿದೆ. ಒಂದು ವೇಳೆ ನೀವು ಈ ಅವಧಿಯನ್ನೂ ಮೀರಿದರೆ ರಿಟರ್ನ್ಸ್ ಸಲ್ಲಿಸಲು ಸಾಧ್ಯವಿಲ್ಲ.
ದಂಡ ಶುಲ್ಕ ಎಷ್ಟು?
1. 2018-19 ಹಣಕಾಸು ವರ್ಷದ ಐಟಿ ರಿಟರ್ನ್ಸ್ ಸಲ್ಲಿಸಲು ಜುಲೈ 31, 2019 ಕೊನೆಯ ದಿನಾಂಕ.
2. ಕೊನೆಯ ದಿನಾಂಕದ ಬಳಿಕ ಅಂದರೆ, ಆಗಸ್ಟ್ 1, 2019 ರಿಂದ ಡಿಸೆಂಬರ್ 31, 2019 ರವರೆಗೆ ರಿಟರ್ನ್ಸ್ ಸಲ್ಲಿಸುವವರು 5000 ರೂ. ದಂಡ ಶುಲ್ಕ ಪಾವತಿಸಬೇಕಾಗುತ್ತದೆ.
3. ಜನವರಿ1, 2020 ರಿಂದ ಮಾರ್ಚ್ 1, 2020ರ ವರೆಗೆ ರಿಟರ್ನ್ಸ್ ಸಲ್ಲಿಸುವವರು 10 ಸಾವಿರ ರೂಪಾಯಿ ದಂಡ ತೆರಬೇಕಾಗುತ್ತದೆ.
4. ಮಾರ್ಚ್ 31, 2020 ರ ಬಳಿಕ 2018-19ನೇ ಸಾಲಿನ ರಿಟರ್ನ್ಸ್ ಸಲ್ಲಿಸಲು ಸಾಧ್ಯವಿಲ್ಲ. ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಬರುವವರೆಗೆ ಕಾಯಬೇಕಾಗುತ್ತದೆ.