ನವದೆಹಲಿ: ಫೆಬ್ರವರಿ 1 ರಂದು ಬಜೆಟ್‌ಗೆ ಮುಂಚಿತವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಅರ್ಥಶಾಸ್ತ್ರಜ್ಞರೊಂದಿಗೆ ಸಮಾಲೋಚನೆ ನಡೆಸುತ್ತಿದ್ದಂತೆ, ಇತ್ತ ಕಡೆ ನಿರ್ಮಲಾ ಸೀತಾರಾಮನ್ ಅವರು ಈ ಸಭೆಯಲ್ಲಿ ಗೈರು ಹಾಜರಾಗಿರುವುದಕ್ಕೆ ಈಗ ಪ್ರತಿಪಕ್ಷಗಳು ವ್ಯಂಗ್ಯವಾಡಿವೆ.




COMMERCIAL BREAK
SCROLL TO CONTINUE READING

ಪ್ರಧಾನಿ ಮೋದಿ ಅವರು ಸುಮಾರು 40 ಅರ್ಥಶಾಸ್ತ್ರಜ್ಞರು, ಉದ್ಯಮದ ಮುಖಂಡರು, ತಜ್ಞರು ಮತ್ತು ಬ್ಯಾಂಕರ್‌ಗಳೊಂದಿಗಿನ ಸಭೆಯಲ್ಲಿ ಭಾರತದ 5 ಟ್ರಿಲಿಯನ್ ಡಾಲರ್ ಆರ್ಥಿಕ ಗುರಿಯನ್ನು ಸಾಧಿಸುವ ಕುರಿತು ಮಾತನಾಡಿದ್ದಾರೆ ಎಂದು ಸುದ್ದಿ ಸಂಸ್ಥೆ ಐಎಎನ್‌ಎಸ್ ತಿಳಿಸಿದೆ. ಹೂಡಿಕೆಗಳು, ಸಾಲದ ಬೆಳವಣಿಗೆ, ಬಳಕೆ ಹೆಚ್ಚಿಸುವುದು ಮತ್ತು ಸುಧಾರಣೆಗಳನ್ನು ಎರಡು ಗಂಟೆಗಳ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ವರದಿಯಾಗಿದೆ.



ಸೀತಾರಾಮನ್ ಅವರು ಬಜೆಟ್ ಪೂರ್ವ ಸಮಾಲೋಚನೆಯನ್ನು ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪಕ್ಷದ ಮುಖಂಡರು ಮತ್ತು ಪದಾಧಿಕಾರಿಗಳೊಂದಿಗೆ ನಡೆಸಿದ್ದರು ಎಂದು ಬಿಜೆಪಿ ಟ್ವೀಟ್ ಮಾಡಿದೆ. ಇನ್ನೊಂದೆಡೆಗೆ ಕಾಂಗ್ರೆಸ್ ಟ್ವೀಟ್ ಮಾಡಿ ಒಬ್ಬ ಮಹಿಳೆ ಕೆಲಸವನ್ನು ಮಾಡಲು ಎಷ್ಟು ಪುರುಷರು ಬೇಕು ಎಂದು ಪ್ರಶ್ನಿಸಿದೆ. ಇದರ ಜೊತೆಗೆ #FindingNirmala ಎಂಬ ಹ್ಯಾಶ್‌ಟ್ಯಾಗ್ ಬಳಸಿ ವ್ಯಂಗ್ಯವಾಡಿದೆ. ಇನ್ನೊಂದೆಡೆಗೆ 2020-21 ರ ಬಜೆಟ್ ಸಿದ್ದತೆಗಾಗಿ ಸಲಹೆಗಳಿಗೆ ಆಹ್ವಾನ ನೀಡಿರುವ ಬಿಜೆಪಿ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್  ' ಇಲ್ಲಿದೆ ಸಲಹೆ , ಮುಂದಿನ ಬಜೆಟ್ ಸಭೆಯಲ್ಲಿ ಹಣಕಾಸು ಸಚಿವರನ್ನು ಆಹ್ವಾನಿಸುವುದನ್ನು ಪರಿಗಣಿಸಿ' ಎಂದು ಹೇಳಿದೆ.



ಇಂದಿನ ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ, ವಾಣಿಜ್ಯ ಸಚಿವ ಪಿಯೂಷ್ ಗೋಯಲ್, ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ನರೇಂದ್ರ ತೋಮರ್ ಉಪಸ್ಥಿತರಿದ್ದರು.