ಎಂಸಿಡಿ ಇನ್ಸ್ಪೆಕ್ಟರ್ಗೆ ಥಳಿಸಿದ ಎಎಪಿ ಶಾಸಕ; ಎಫ್ಐಆರ್ ದಾಖಲು
ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಗೆ ಸೇರಿದ ಇನ್ಸ್‌ಪೆಕ್ಟರ್‌ರನ್ನು ಥಳಿಸಿ ಹಲ್ಲೆ ಮಾಡಿದ ಆರೋಪದ ಮೇಲೆ ಆಮ್ ಆದ್ಮಿ ಪಕ್ಷದ ಶಾಸಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ನವದೆಹಲಿ: ಉತ್ತರ-ಪಶ್ಚಿಮ ದೆಹಲಿಯ ಆದರ್ಶ್ ನಗರ ಪ್ರದೇಶದ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಗೆ ಸೇರಿದ ಇನ್ಸ್‌ಪೆಕ್ಟರ್‌ರನ್ನು ಥಳಿಸಿ ಹಲ್ಲೆ ಮಾಡಿದ ಆರೋಪದ ಮೇಲೆ ಆಮ್ ಆದ್ಮಿ ಪಕ್ಷದ ಶಾಸಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೆಹಲಿಯ ಲಾಲ್ ಬಾಗ್ ಆಜಾದ್‌ಪುರ ಪ್ರದೇಶದಲ್ಲಿ ಗುರುವಾರ ಕೆಲವು ಸ್ವಚ್ಚತಾ ಕಾರ್ಯಗಳನ್ನು ಕೈಗೊಂಡಿದ್ದ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ದೆಹಲಿಯ ಮಾಡೆಲ್ ಟೌನ್ ಕ್ಷೇತ್ರದ ಎಎಪಿ ಶಾಸಕ ಅಖಿಲೇಶ್ ಪತಿ ತ್ರಿಪಾಠಿ, ಮತ್ತವರ ಬೆಂಬಲಿಗರು ಅದನ್ನು ತಡೆಯಲು ಪ್ರಯತ್ನಸಿದ್ದಾಗಿ ಎಂಸಿಡಿ ಇನ್ಸ್‌ಪೆಕ್ಟರ್ ರವೀಂದರ್ ಕುಮಾರ್ ಗುಪ್ತಾ ಅವರು ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸ್ವಚ್ಚತಾ ಕಾರ್ಯ ನಿಲ್ಲಿಸಲು ಆಕ್ಷೇಪ ವ್ಯಕ್ತಪಡಿಸಿದಾಗ ಶಾಸಕ ತ್ರಿಪಾಠಿ ಅವರು ಇನ್ಸ್ಪೆಕ್ಟರ್ ಅವರನ್ನು ನಿಂದಿಸಿ, ಥಳಿಸಿದ್ದಾಗಿ ಗುಪ್ತಾ ಹೇಳಿದ್ದಾರೆ. ಗುರುವಾರ ಮಧ್ಯಾಹ್ನ 1: 30ರಲ್ಲಿ ಇ ಘಟನೆ ನಡೆದಿದ್ದು, ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಗಾಯಗೊಂಡ ಎಂಸಿಡಿ ಇನ್ಸ್‌ಪೆಕ್ಟರ್‌ರನ್ನು ಜಹಾಂಗೀರ್‌ಪುರಿಯ ಬಿಜೆಆರ್‌ಎಂ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸದ್ಯ ಪ್ರಕರಣದ ಪ್ರಾಥಮಿಕ ತನಿಖೆ ನಡೆಸಿರುವ ಪೊಲೀಸರು ಶಾಸಕ ಅಖಿಲೇಶ್ ಪತಿ ತ್ರಿಪಾಠಿ ವಿರುದ್ಧ ಎಫ್ಐಆರ್ ದಾಖಲಿಸಿ ಮತ್ತಷ್ಟು ತನಿಖೆ ನಡೆಸಿದ್ದಾರೆ.