ಮುಂಬೈ ಬಿಪಿಸಿಎಲ್ ಘಟಕದಲ್ಲಿ ಅಗ್ನಿ ಅವಘಡ; 20ಕ್ಕೂ ಹೆಚ್ಚು ಮಂದಿಗೆ ಗಾಯ
ಚೆಂಬೂರ್ ಪ್ರದೇಶದ ಮಹಲ್ ಗಾವ್ ನಲ್ಲಿರುವ ಪೆಟ್ರೋಲಿಯಂ ಸಂಸ್ಕರಣಾ ಘಟಕದಲ್ಲಿ ಮಧ್ಯಾಹ್ನ 2.55ರ ಸಮಯದಲ್ಲಿ ಸ್ಫೋಟ ಸಂಭವಿಸಿದೆ.
ಮುಂಬೈ: ಇಲ್ಲಿನ ಚೆಂಬೂರ್ ಎಂಬಲ್ಲಿರುವ ಭಾರತ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್ ಘಟಕದಲ್ಲಿ ಬುಧವಾರ ಮಧ್ಯಾಹ್ನ ಅಗ್ನಿ ಅವಘಡ ಸಂಭವಿಸಿದ್ದು, 20ಕ್ಕೂ ಹೆಚ್ಚು ಮಂದಿ ಈ ಘಟನೆಯಲ್ಲಿ ಗಾಯಗೊಂಡಿದ್ದಾರೆ.
ಚೆಂಬೂರ್ ಪ್ರದೇಶದ ಮಹಲ್ ಗಾವ್ ನಲ್ಲಿರುವ ಪೆಟ್ರೋಲಿಯಂ ಸಂಸ್ಕರಣಾ ಘಟಕದಲ್ಲಿ ಮಧ್ಯಾಹ್ನ 2.55ರ ಸಮಯದಲ್ಲಿ ಸ್ಫೋಟ ಸಂಭವಿಸಿದ್ದು, ಅಗ್ನಿಶಾಮಕ ದಳದ 9ಕ್ಕೂ ಹೆಚ್ಚು ವಾಹನಗಳು ಸ್ಥಳಕ್ಕಾಗಮಿಸಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಘಟಕದಲ್ಲಿದ್ದ ಉದ್ಯೋಗಿಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಆರಂಭದಲ್ಲಿ 40ಕ್ಕೂ ಹೆಚ್ಚು ಮಂದಿ ಅವಘಡದಿಂದ ಆಘಾತಕ್ಕೊಳಗಾದರಾದರೂ, ಪ್ರಾಥಮಿಕ ಚಿಕಿತ್ಸೆ ಬಳಿಕ 20 ಮಂದಿ ಸುಧಾರಿಸಿಕೊಂಡಿದ್ದಾರೆ ಎನ್ನಲಾಗಿದೆ. ಘಟಕದಲ್ಲಿ ಸಂಭವಿಸಿದ ಸ್ಫೋಟದ ಪ್ರಭಾವದಿಂದಾಗಿ ನೆರೆಹೊರೆಯ ಕಟ್ಟಡಗಳ ಗಾಜುಗಳೂ ಪುಡಿಪುಡಿಯಾಗಿವೆ.